ನವದೆಹಲಿ, ಜು 15 (DaijiworldNews/DB): ಗರ್ಭಾವಸ್ಥೆಯನ್ನು ಕೊನೆಗೊಳಿಸಲು ನಾವು ಅವಕಾಶ ಕೊಡುವುದಿಲ್ಲ. ಹಾಗೆ ಮಾಡಿದರೆ ಭ್ರೂಣವನ್ನು ಕೊಂದಂತೆ ಆಗುತ್ತದೆ. ಅದರ ಬದಲಾಗಿ ಹೆರಿಗೆಯ ಬಳಿಕ ಮಗುವನ್ನು ದತ್ತು ನೀಡಿ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ.
23 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸಲು ಕೋರಿ ಅವಿವಾಹಿತ ಮಹಿಳೆ ಸಲ್ಲಿಸಿದ್ದ ಅರ್ಜಿಗೆ ಸಮ್ಮತಿ ಸೂಚಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರನ್ನೊಳಗೊಂಡ ಪೀಠವು, ಈ ಹಂತದಲ್ಲಿ ಗರ್ಭಪಾತವು ಭ್ರೂಣವನ್ನು ಕೊಂದಂತೆ ಆಗುತ್ತದೆ. ಮಹಿಳೆ ಹೆರಿಗೆಯಾಗುವವರೆಗೆ ಸುರಕ್ಷಿತವಾಗಿ ಇರಲು ನ್ಯಾಯಾಲಯ ವ್ಯವಸ್ಥೆ ಮಾಡುತ್ತದೆ. ಅವಳಿಗೆ ಹೆರಿಗೆಯಾದ ಬಳಿಕ ಆ ಮಗುವನ್ನು ದತ್ತು ನೀಡಬಹುದು. ದತ್ತು ಸ್ವೀಕಾರಕ್ಕೆ ತುಂಬಾ ಮಂದಿ ಪ್ರಸ್ತುತ ಕಾಯುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಮಹಿಳೆ ಅವಿವಾಹಿತಳಾಗಿರುವುದರಿಂದ ಹೆರಿಗೆ ಬಳಿಕ ಮಾನಸಿಕ ಯಾತನೆಯಾಗುವ ಸಂಭವವಿದೆ. ಅಲ್ಲದೆ ಮಗುವನ್ನು ಬೆಳೆಸುವ ಸ್ಥಿತಿಯಲ್ಲಿ ಆಕೆ ಇಲ್ಲ ಎಂದು ಕಕ್ಷಿದಾರರ ಪರ ವಕೀಲರು ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಪೀಠವು, ಮಗುವನ್ನು ಬೆಳೆಸಲು ಆಕೆಯನ್ನು ಒತ್ತಾಯಪಡಿಸುವಂತಿಲ್ಲ ಎಂದು ತಿಳಿಸಿತು.