ನವದೆಹಲಿ, ಜು 15 (DaijiworldNews/DB): ಪಾಕ್ ಪತ್ರಕರ್ತರ ಜೊತೆ ಭಾರತದ ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ವೇದಿಕೆ ಹಂಚಿಕೊಂಡಿರುವ ಫೋಟೋಗಳನ್ನು ಸಾಕ್ಷ್ಯ ಸಮೇತ ಬಿಜೆಪಿ ಇಂದು ಬಿಡುಗಡೆ ಮಾಡಿದೆ.
ಪಾಕ್ ಪತ್ರಕರ್ತರನ್ನು ಐಎಸ್ಐ ಪರ ಗೂಢಾಚಾರಿಕೆಗಾಗಿ ಅನ್ಸಾರಿ ಆಹ್ವಾನಿಸಿದ್ದರು ಎಂಬ ಬಿಜೆಪಿಯ ಆರೋಪವನ್ನು ಹಮೀದ್ ಅನ್ಸಾರಿ ತಳ್ಳಿ ಹಾಕಿದ ಬೆನ್ನಲ್ಲೇ ಫೋಟೋ ಬಿಡುಗಡೆ ಮಾಡಿರುವ ಬಿಜೆಪಿಯ ವಕ್ತಾರ ಗೌರವ್ ಭಾಟಿಯ, ಉಗ್ರರಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಕ್ ಪತ್ರಕರ್ತರ ಜೊತೆ ಹಮೀದ್ ಅನ್ಸಾರಿ ಕುಳಿತಿರುವ ಚಿತ್ರ ಇದಾಗಿದೆ ಎಂದಿದ್ದಾರೆ.
ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾ ತಮ್ಮೊಂದಿಗೆ ಹಲವು ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದರು ಎಂಬ ಅನ್ಸಾರಿ ಹೇಳಿಕೆ ಆಧರಿಸಿ ಬಿಜೆಪಿಯು ಅನ್ಸಾರಿ ವಿರುದ್ದ ಆರೋಪ ಮಾಡಿತ್ತು. ಅಲ್ಲದೆ 2010 ಡಿಸೆಂಬರ್ 11ರಂದು ಉಗ್ರರಿಗೆ ಸಂಬಂಧಿಸಿದ ಕಾರ್ಯಕ್ರಮವೊಂದನ್ನು ತಾನು ಉದ್ಘಾಟಿಸಿದ್ದೆ ಎಂದು ಅನ್ಸಾರಿ ಹೇಳಿರುವುದು ಬಿಜೆಪಿಗರನ್ನು ಕೆರಳಿಸಿತ್ತು.