ಬೆಂಗಳೂರು, ಜು 15 (DaijiworldNews/DB): ರಾರ್ಜ ಸರ್ಕಾರದ ಯಾವುದೇ ಇಲಾಖೆಗಳ ಕಚೇರಿ ಸಮಯದಲ್ಲಿ ಸಾರ್ವಜನಿಕರು ಅನಧಿಕೃತವಾಗಿ ವೀಡಿಯೋ ಮಾಡುವುದು ಅಥವಾ ಫೋಟೋ ತೆಗೆಯುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಿ ಕಚೇರಿಗಳಿಗೆ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಸಾರ್ವಜನಿಕರು ಆಗಮಿಸುವುದು ಸಾಮಾನ್ಯ. ಆದರೆ ಇಂತಹ ಸಂದರ್ಭದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳ ಕಾರ್ಯ ನಿರ್ವಹಣೆ ವೇಳೆಯಲ್ಲಿ ಬಂದು ಫೋಟೋ/ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಾರೆ. ಅಲ್ಲದೆ, ಇವುಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರ ಮತ್ತು ಇಲಾಖೆ ಘನತೆಗೆ ಕುಂದುಬರುವಂತೆ ಮಾಡಲಾಗುತ್ತಿದೆ. ಮಹಿಳಾ ನೌಕರರಿಗೆ ಇದರಿಂದ ತೀರಾ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವೀಡಿಯೋ ಮಾಡುವುದು ನಿಷೇಧಿಸಲಾಗಿದೆ ಎಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.
ಅನುಮತಿ ಇಲ್ಲದೆ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವಿಡಿಯೋ ಮಾಡದಂತೆ ತಡೆಯುವ ಸಲುವಾಗಿ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರು ಈ ಹಿಂದೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.