ಬೆಂಗಳೂರು, ಜು 15 (DaijiworldNews/DB): ಜೆ.ಜೆ. ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿರುವಂತೆ ಇನ್ನೊಂದು ತಿರುವು ಸಿಕ್ಕಿದ್ದು, ಉರ್ದು ಮಾತನಾಡದಿರುವುದೇ ಕೊಲೆಗೆ ಕಾರಣ ಹೊರತು ಬೈಕ್ ಅಪಘಾತವಲ್ಲ ಎಂಬ ಅಂಶ ಗೊತ್ತಾಗಿದೆ.
ಚಂದ್ರು ಕೊಲೆಗೆ ಕಾರಣವೇನು ಎಂಬ ಬಗ್ಗೆ ಸಿಐಡಿ ಅಧಿಕಾರಿಗಳು ಸಲ್ಲಿಸಿರುವ 179 ಪುಟಗಳ ಚಾರ್ಜ್ ಶೀಟ್ನಲ್ಲಿ ಈ ಅಂಶ ಉಲ್ಲೇಖವಾಗಿದೆ. ಈಗಾಗಲೇ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದು, ಚಂದ್ರು ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಆರೋಪಿಯು ಆತನನ್ನು ಕೊಲೆಗೈದಿದ್ದಾನೆ.
ಸೈಮನ್ ಹುಟ್ಟುಹಬ್ಬ ಮುಗಿಸಿ ಚಿಕನ್ ಕಬಾಬ್ ತಿನ್ನಲೆಂದು ಸೈಮನ್ ಮತ್ತು ಚಂದ್ರು ಬೈಕ್ ನಿಲ್ಲಿಸಿ ಅಲ್ಲೇ ಇದ್ದ ಹೊಟೇಲ್ಗೆ ಹೋಗಿದ್ದ ವೇಳೆ ಆರೋಪಿ ಶಾಹೀನ್ ಎದುರಾಗುತ್ತಾನೆ. ಈ ವೇಳೆ ಶಾಹೀನ್ ಉರ್ದುವಿನಲ್ಲಿ ಬೈಯಲು ಆರಂಭಿಸಿದ್ದಾನೆ. ಆದರೆ ಚಂದ್ರು ಮತ್ತು ಸೈಮನ್ ನಾವು ನಿಮಗೆ ಏನೂ ಹೇಳಲಿಲ್ಲ ಎಂದಾಗ ಶಾಹೀನ್ ಜಗಳ ತೆಗೆದಿದ್ದ. ಈ ಜಗಳ ಚಂದ್ರು ಕೊಲೆಯಲ್ಲಿ ಅಂತ್ಯವಾಗಿತ್ತು. ಇದೀಗ ಸಿಐಡಿ ಅಧಿಕಾರಿಗಳ ವಶದಲ್ಲಿರುವ ಆರೋಪಿ ಶಾಹೀನ್ನನ್ನು ಈಗಾಗಲೇ ಹಲವು ಬಾರಿ ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆ ವೇಳೆ ಚಂದ್ರು ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕಾಗಿ ಆತ ಕೊಲೆಗೈದಿದ್ದಾನೆ ಎಂಬ ಅಂಶ ಅಧಿಕಾರಿಗಳಿಗೆ ಗೊತ್ತಾಗಿದೆ ಎನ್ನಲಾಗಿದೆ.