ನವದೆಹಲಿ, ಜು 15 (DaijiworldNews/MS): ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ನಲ್ಲಿ ಪ್ರಕಟವಾದ ವರದಿಯಂತೆ, ಹೈರಿಸ್ಕ್ ವಯಸ್ಕ ಕೊರೊನಾ ರೋಗಿಗೆ ನೇಸಲ್ ಸ್ಪ್ರೇ ಹಾಕಿದ ಕೇವಲ 24 ಗಂಟೆಗಳಲ್ಲಿ ಅವರ ದೇಹದಲ್ಲಿದ್ದ ವೈರಲ್ ಲೋಡ್ ಶೇ.94ರಷ್ಟು ತಗ್ಗಿದೆ. 48 ಗಂಟೆಗಳಲ್ಲಿ ಅದು ಶೇ.99ರಷ್ಟು ತಗ್ಗಿದೆ ಎಂದು ಔಷಧದ 3 ನೇ ಹಂತದ ಪ್ರಯೋಗದ ಫಲಿತಾಂಶಗಳು ಹೇಳಿದೆ.
ಏಳು ದಿನಗಳವರೆಗೆ ಮೂಗಿನ ಹೊಳ್ಳೆಗೆ ಎರಡು ಸ್ಪ್ರೇಗಳಂತೆ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇಯನ್ನು ದಿನಕ್ಕೆ ಆರು ಬಾರಿಯಂತೆ ಹಾಕಲಾಯಿತು. ಡೆಲ್ಟಾ ಮತ್ತು ಓಮಿಕ್ರಾನ್ ಉಲ್ಬಣಗಳ ಸಮಯದಲ್ಲಿ ಅಧ್ಯಯನವನ್ನು ನಡೆಸಲಾಯಿತು.
ಭಾರತದ 306 ಮಂದಿ ಲಸಿಕೆ ಪಡೆದಿರುವ ಮತ್ತು ಪಡೆಯದೇ ಇರುವ ಕೊರೊನಾ ಸೋಂಕಿತ ವಯಸ್ಕರ ಮೇಲೆ ಈ ನೇಸಲ್ ಸ್ಪ್ರೇ ಪ್ರಯೋಗ ನಡೆಸಲಾಗಿತ್ತು. ಮುಂಬೈ ಮೂಲದ ಫಾರ್ಮಾ ಕಂಪನಿ ಗ್ಲೆನ್ಮಾರ್ಕ್ ಈ ಅಧ್ಯಯನ ಕೈಗೊಂಡಿತ್ತು. ಸ್ಪ್ರೇ ಹಾಕಿದ ಕೇವಲ 24 ಗಂಟೆಗಳಲ್ಲೇ ಅತ್ಯುತ್ತಮ ಫಲಿತಾಂಶ ನೀಡಿದೆ ಎಂದು ವರದಿ ಹೇಳಿದೆ.