ನವದೆಹಲಿ, ಜು 14 (DaijiworldNews/DB): ರಾಷ್ಟ್ರ ಲಾಂಛನದ ಸಿಂಹಕ್ಕೆ ಹಲ್ಲುಗಳಿದ್ದು, ಅಗತ್ಯ ಬಿದ್ದಲ್ಲಿ ಕಚ್ಚುವುದಕ್ಕೂ ಸಿದ್ದ. ಹೀಗಾಗಿ ವಿರೋಧ ಮಾಡುವವರು ಎಚ್ಚೆತ್ತುಕೊಂಡರೆ ಉತ್ತಮ ಎಂದು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಹೇಳಿದ್ದಾರೆ.
ಸಂಸತ್ ಭವನದ ಮೇಲೆ ನೂತನವಾಗಿ ನಿರ್ಮಾಣಗೊಂಡಿರುವ ರಾಷ್ಟ್ರ ಲಾಂಛನದ ಕುರಿತ ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿರುವ ಅವರು, ಇದು ಸ್ವತಂತ್ರ ಭಾರತದ ಸಿಂಹ. ಅದಕ್ಕೆ ಹಲ್ಲುಗಳಿದ್ದು, ಅವುಗಳನ್ನೂ ತೋರಿಸಲಾಗಿದೆ. ಅಗತ್ಯ ಬಿದ್ದಲ್ಲಿ ಕಚ್ಚುವುದಕ್ಕೂ ಈ ಸಿಂಹಗಳು ಸಿದ್ದ ಎಂದಿದ್ದಾರೆ.
ಸೋಮವಾರವಷ್ಟೇ ಈ ನೂತನ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಈ ಸಿಂಹವು ಕೋಪದಿಂದಿರುವಂತೆ ಭಾಸವಾಗುತ್ತಿದ್ದು, ರಾಷ್ಟ್ರ ಲಾಂಛನವನ್ನು ಕೇಂದ್ರ ಸರ್ಕಾರ ವಿರೂಪಗೊಳಿಸಿದೆ ಎಂದು ವಿಪಕ್ಷಗಳು ಟೀಕಿಸಿದ್ದವು.