ನವದೆಹಲಿ, ಜು 14 (DaijiworldNews/DB): ತೃತೀಯ ಲಿಂಗಿಗಳಿಗೆ ಪೈಲಟ್ ಪರವಾನಗಿ ನೀಡಲು ಯಾವುದೇ ನಿರ್ಬಂಧವಿಲ್ಲ ಎಂಬುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸ್ಪಷ್ಟಪಡಿಸಿದೆ.
ಡಿಜಿಸಿಎಯು ವೈದ್ಯಕೀಯ ಕಾರಣಗಳಿಂದಾಗಿ ಭಾರತದ ಮೊದಲ ತೃತೀಯ ಲಿಂಗಿ ಪೈಲಟ್ ಆಡಮ್ ಹಿಲರಿ ಅವರನ್ನು ಈ ಹಿಂದೆ ಅನರ್ಹಗೊಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸಂಸ್ಥೆ, ವೈದ್ಯಕೀಯ ಸೇವೆಗಳ ಮಹಾನಿರ್ದೇಶಕ ಗ್ರೂಪ್ ಕ್ಯಾಪ್ಟನ್ ವೈ.ಎಸ್. ದಹಿಯಾ ಸಹಿ ಮಾಡಿದ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಹಿಲರಿ ಅವರಿಗೆ ವಾಣಿಜ್ಯ ಪೈಲಟ್ ಪರವಾನಿಗೆ ನೀಡಲು ಡಿಜಿಸಿಎ ನಿರಾಕರಣೆ ಮಾಡಿಲ್ಲ ಎಂದು ತಿಳಿಸಿದೆ.
ತೃತೀಯ ಲಿಂಗಿಗಳಿಗೆ ಪೈಲಟ್ ಪರವಾನಿಗೆ ನೀಡಲು ಯಾವುದೇ ನಿರ್ಬಂಧಗಳು ಡಿಜಿಸಿಎಯಲ್ಲಿ ಇಲ್ಲ. 1937ರ ವಾಯುಯಾನ ನಿಯಮಗಳ ಅಡಿಯಲ್ಲಿರುವ ನಿಯಮಾನುಸಾರ ಅವರ ವಯಸ್ಸು, ಶಿಕ್ಷಣ, ವೈದ್ಯಕೀಯ ಮಾನದಂಡಗಳು ಅರ್ಹವಾಗಿದ್ದಲ್ಲಿ ಅವರಿಗೂ ಪರವಾನಿಗೆ ನೀಡಲಾಗುತ್ತದೆ ಎಂದು ತಿಳಿಸಿದೆ.