ಬೆಂಗಳೂರು, ಜು 14 (DaijiworldNews/DB): ಸಿದ್ದರಾಮಯ್ಯನವರ ಮೇಲೆ ಕೆಲವರಿಗೆ ಆತಂಕ ಶುರುವಾಗಿದೆ. ಅದಕ್ಕಾಗಿಯೇ ವ್ಯಕ್ತಿ ಪೂಜೆ ಮಾಡಿದರೂ ನಾಯಕರು ಸುಮ್ಮನಿದ್ದಾರೆ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ದಲಿತ ವಿರೋಧಿ. ಜಾತಿಗಳನ್ನು ಒಡೆದದ್ದೇ ಅವರು. ಲಿಂಗಾಯತ, ಒಕ್ಕಲಿಗ ಜಾತಿಗಳನ್ನೂ ಒಡೆದರು. ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೂ ಸಿದ್ದರಾಮಯ್ಯ ಬಿಸಿ ತಟ್ಟಿರುವುದರಿಂದ ಅವರೂ ಓಲೈಕೆಗೆ ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಯಾರಿಗೂ ಒಳ್ಳೆಯದಾಗಬೇಕೆಂದು ಕಾಂಗ್ರೆಸ್ ಬಯಸುವುದಿಲ್ಲ. ಒಡಕು ಸೃಷ್ಟಿಸುವುದೇ ಅವರ ಕೆಲಸ. ಬಹಳ ವರ್ಷದಿಂದ ಗಮನಿಸಿದಂತೆ ಅವರ ಗುಂಡಿಯನ್ನು ಅವರೇ ತೋಡಿಕೊಳ್ಳುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದವರು ಇದೇ ವೇಳೆ ವ್ಯಂಗ್ಯವಾಡಿದರು.
ಎಸ್. ಬಂಗಾರಪ್ಪ ಸಿಎಂ ಆಗದ ಎರಡು ವರ್ಷ ಬಳಿಕ ಬಂಗಾರಪ್ಪ ಉತ್ಸವ ಮಾಡುತ್ತಾರೆ. ಬಳಿಕ ಅವರಿಗೆ ಕಿರುಕುಳನೀಡಲಾರಂಭಿಸಿದರು. ಉತ್ಸವ ಗಾಂಧಿ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಬೇಕೇ ಹೊರತು ಬೇರೆಯವರ ಉತ್ಸವಕ್ಕೆ ಅವಕಾಶ ಅಲ್ಲಿಲ್ಲ. ಇದೀಗ ಸಿದ್ದರಾಮೋತ್ಸವ ಹಮ್ಮಿಕೊಂಡಿದ್ದಾರೆ. ಸಿದ್ದರಾಮಯ್ಯ ಮುಂದೆ ಹೈಕಮಾಂಡ್ ಶರಣಾಗಿದೆ. ಶಕ್ತಿಯನ್ನೇ ಆ ಪಕ್ಷ ಕಳೆದುಕೊಂಡಿದೆ ಎಂದರು.