ಬೆಂಗಳೂರು, ಜು 14 (DaijiworldNews/DB): ರಾಮ, ಹನುಮ ಮತ್ತು ರಾಷ್ಟ್ರ ಲಾಂಛನದಲ್ಲಿರುವ ಸಿಂಹದ ಫೋಟೋಗಳನ್ನು ಹಿಂದೆ ಮತ್ತು ಈಗ ಎಂದು ವರ್ಗೀಕರಿಸಿ ನಟ ಪ್ರಕಾಶ್ ರಾಜ್ ಟ್ವೀಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಇದಕ್ಕೆ ಜನ ವಿವಿಧ ರೀತಿಯ ಕಾಮೆಂಟ್ಗಳನ್ನು ಮಾಡಿದ್ದಾರೆ.
ಶಾಂತ ಸ್ವಭಾವದಲ್ಲಿರುವ ರಾಮ, ಹನುಮ ಮತ್ತು ಲಾಂಛನದ ಸಿಂಹ ಫೋಟೋವನ್ನು ಒಂದೆಡೆ ಮತ್ತು ಕೋಪದಲ್ಲಿರುವಂತೆ ಭಾಸವಾಗುವ ರಾಮ, ಹನುಮ ಮತ್ತು ರಾಷ್ಟ್ರ ಲಾಂಛನದ ಸಿಂಹದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ನಾವೇನನ್ನು ಪ್ರತಿನಿಧಿಸುತ್ತಿದ್ದೇವೆ ಎಂದೂ ಪ್ರಶ್ನಿಸಿದ್ದಾರೆ.
ಇನ್ನು ಪ್ರಕಾಶ್ ರಾಜ್ ಅವರ ಈ ಪೋಸ್ಟ್ಗೆ ಹಲವಾರು ರೀತಿಯ ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಪೋಸ್ಟ್ ಪರವಾಗಿ ಪ್ರತಿಕ್ರಿಯಿಸಿದ್ದರೆ, ಇನ್ನು ಕೆಲವರು ಅವರ ಪೋಸ್ಟ್ನ್ನು ವಿರೋಧಿಸಿದ್ದಾರೆ.
ಹೊಸ ಸಂಸತ್ ಭವನದ ಛಾವಣಿಯ ಮೇಲೆ ಸ್ಥಾಪಿಸಲಾಗಿರುವ ಪರಿಶುದ್ಧ ಕಂಚಿನಿಂದ ನಿರ್ಮಾಣವಾಗಿರುವ 9500 ಕೆಜಿ ತೂಕದ ರಾಷ್ಟ್ರ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆಗೊಳಿಸಿದ್ದರು. ಇದಾದ ನಂತರ ಹೊಸ ಸಂಸತ್ ಭವನದ ಛಾವಣಿಯ ಮೇಲೆ ಸ್ಥಾಪಿಸಲಾಗಿರುವ ರಾಷ್ಟ್ರ ಲಾಂಛನ ಮತ್ತು ಸಾರನಾಥದ ಅಶೋಕ ಸ್ತಂಭದಲ್ಲಿರುವ ಲಾಂಛನದ ಚಿತ್ರಗಳನ್ನು ಹೋಲಿಕೆ ಮಾಡಿ ವಿಪಕ್ಷಗಳು ಸಹಿತ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಟೀಕೆ ವ್ಯಕ್ತಪಡಿಸಿದ್ದರು. ಹೊಸ ಲಾಂಛನದಲ್ಲಿರುವ ಸಿಂಹವು ಕೋಪದಲ್ಲಿರುವಂತೆ ಭಾಸವಾಗುತ್ತಿದ್ದು, ಸಾರನಾಥದ ಲಾಂಛನದಲ್ಲಿರುವ ಸಿಂಹವು ಶಾಂತ ಸ್ವಭಾವದಲ್ಲಿದೆ. ಕೇಂದ್ರ ಸರ್ಕಾರವು ರಾಷ್ಟ್ರ ಲಾಂಛನವನ್ನೇ ವಿರೂಪಗೊಳಿಸಿದೆ ಎಂದು ಟೀಕಿಸಿದ್ದರು.