ನವದೆಹಲಿ, ಜು 14 (DaijiworldNews/DB): ನಾನು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಮಾಡದಂತೆ ಅವಶ್ಯ ಕ್ರಮ ವಹಿಸುವುದಾಗಿ ವಿರೋಧಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಹೇಳಿದ್ದಾರೆ.
ಅಸ್ಸಾಂನ ವಿರೋಧ ಪಕ್ಷದ ಶಾಸಕರೊಂದಿಗೆ ಸಂವಾದ ನಡೆಸಿದ ಅವರು, ಬಿಜೆಪಿ ಸರ್ಕಾರವು ಮೂರ್ಖತನದಿಂದ ಪೌರತ್ವ ತಿದ್ದುಪಡಿ ಕಾಯಿದೆಯನ್ನು ತರಾತುರಿಯಲ್ಲಿ ಜಾರಿಗೆ ತರಲು ಸಿದ್ದತೆ ನಡೆಸಿತ್ತು. ಆದರೆ ಈವರೆಗೆ ಅದು ಸಾಧ್ಯವಾಗಿಲ್ಲ. ಮುಂದೆ ನಾನು ರಾಷ್ಟ್ರಪತಿಯಾಗಿ ಆಯ್ಕೆಯಾದಲ್ಲಿ ಯಾವುದೇ ಕಾರಣಕ್ಕೂ ಈ ಕಾಯಿದೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದರು.
ಅಸ್ಸಾಂಗೆ ಪೌರತ್ವ ಎಂಬುದು ಪ್ರಮುಖ ವಿಷಯವಾಗಿದೆ. ದೇಶಾದ್ಯಂತ ಈ ಕಾಯಿದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಬಹಳ ಉತ್ಸುಕವಾಗಿದೆ. ಆದರೆ ಅದನ್ನು ಇನ್ನೂ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಮುಂದೆಯೂ ಜಾರಿಗೊಳಿಸಲು ಬಿಡುವುದಿಲ್ಲ. ಸಂವಿಧಾನವು ಇಂದು ಅಪಾಯದಲ್ಲಿದ್ದು, ಅದನ್ನು ಅಧಿಕಾರದಲ್ಲಿ ಇರುವವವರಿಂದ ರಕ್ಷಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ರಾಷ್ಟ್ರಪತಿ ಭವನದಲ್ಲಿ ನಾನಿದ್ದರೆ ಖಂಡಿತಾ ಅದನ್ನು ಮಾಡುತ್ತೇನೆ ಎಂದು ತಿಳಿಸಿದರು.