ಹೈದರಾಬಾದ್, ಜು 14 (DaijiworldNews/DB): ಉನ್ನತ ಹುದ್ದೆಯಲ್ಲಿರುವುದಾಗಿ ನಂಬಿಸಿ 11 ಮಂದಿ ಮಹಿಳೆಯರನ್ನು ಮದುವೆಯಾಗಿರುವ ಖತರ್ನಾಕ್ ವ್ಯಕ್ತಿಯೋರ್ವನ ಕರಾಳ ಮುಖವನ್ನು ಕೊನೆಗೂ ಆತನ ಪತ್ನಿಯರೇ ಬಯಲು ಮಾಡಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. 12ನೇ ಮದುವೆಗೆ ಸಿದ್ದತೆ ನಡೆಸುವ ವೇಳೆ ಈತ ಸಿಕ್ಕಿ ಬಿದ್ದಿದ್ದಾನೆ.
ಆಂಧ್ರದ ಗುಂಟೂರು ಜಿಲ್ಲೆಯ ಬೇತಂಪುಡಿಯ ಅಡಪ ಶಿವಶಂಕರ್ ಎಂಬಾತನೇ ವಂಚಕ. ಸಚಿವರೊಬ್ಬರ ಸಂಬಂಧಿಯೂ ಆಗಿರುವ ಈತ ಸಚಿವರ ಹೆಸರು ಹೇಳಿಕೊಂಡು ಮತ್ತು ದೊಡ್ಡ ಕಂಪೆನಿಗಳ ಹೆಸರು ಹೇಳಿ ಮಹಿಳೆಯರನ್ನು ನಂಬಿಸಿ ಮದುವೆಯಾಗುತ್ತಿದ್ದ. ಶ್ರೀಮಂತ ಮಹಿಳೆಯರೇ ಈತನ ಟಾರ್ಗೆಟ್. ಅದರಲ್ಲೂ ವಿಧವೆಯರಿಗಾಗಿ ಬಲೆ ಬೀಸುತ್ತಿದ್ದ ಎನ್ನಲಾಗಿದೆ. ಮ್ಯಾಟ್ರಿಮೊನಿ ಸೈಟ್ಗಳ ಮೂಲಕ ವಿವಾಹಾಕಾಂಕ್ಷಿ ಮಹಿಳೆಯರನ್ನು ಗುರುತು ಮಾಡಿಕೊಂಡು ಅವರಿಂದ ಮೊಬೈಲ್ ಸಂಖ್ಯೆ ಪಡೆದು ಮಾತುಕತೆ ನಡೆಸುತ್ತಿದ್ದ. ದೊಡ್ಡ ಕಂಪೆನಿ ಹೆಸರು ಹೇಳಿಕೊಂಡು ಆ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ಹೆಚ್ಚಾಗಿ ಹೊರಗಡೆಯೇ ಕೆಲಸಗಳಿರುತ್ತವೆ ಎಂದು ನಂಬಿಸುತ್ತಿದ್ದ. ಹೀಗೆ ನಂಬಿಸಿ ಒಟ್ಟು 11 ಮಂದಿ ಮಹಿಳೆಯರನ್ನು ಮದುವೆಯಾಗಿದ್ದ. ಈತ 12ನೇ ಮದುವೆಗೆ ಸಿದ್ದತೆ ನಡೆಸುತ್ತಿದ್ದ ವೇಳೆ ಒಬ್ಬಾಕೆ ಪತ್ನಿಗೆ ಸಂಶಯ ಬಂದು ವಿಚಾರಿಸಿದಾಗ ಪತಿಯ ಕರಾಳ ಮುಖ ಬಯಲಾಗಿದೆ. ಬಳಿಕ ಈತನ ಹಲವು ಪತ್ನಿಯರು ಸೇರಿ ಸುದ್ದಿಗೋಷ್ಠಿ ನಡೆಸಿ ಈತನ ಇನ್ನೊಂದು ಮುಖವನ್ನು ಬಯಲಿಗೆಳೆದಿದ್ದಾರೆ.
ಆತನ ಪತ್ನಿಯರು ಹೇಳುವ ಪ್ರಕಾರ ಈತನ ಗೆಟಪ್, ಹೇಳಿಕೊಳ್ಳುವ ಕಂಪೆನಿಯ ಹೆಸರು, ಸಂಬಳ ಕೇಳಿ ಮದುವೆಯಾಗಿದ್ದಾರೆ. ಅಲ್ಲದೆ, ತಮ್ಮಲ್ಲಿರುವ ಹಣ, ಒಡವೆಗಳನ್ನೂ ಆತನಿಗೆ ನೀಡಿದ್ದಾರೆ. ನಿಜವಾಗಿಯೂ ಯಾವುದೇ ಕೆಲಸ ಇಲ್ಲದ ಈತ ಮದುವೆ ನೆಪದಲ್ಲಿ ಮಹಿಳೆಯರಿಂದ ಹಣ ಲೂಟಿ ಮಾಡುವುದೇ ಕೆಲಸವಾಗಿಸಿಕೊಂಡಿದ್ದಾನೆ ಎನ್ನುತ್ತಾರೆ.
ಉನ್ನತ ಹುದ್ದೆಯಲ್ಲಿರುವುದರಿಂದ ಕೆಲಸದ ನಿಮಿತ್ತ ಬೇರೆಡೆ ಹೋಗಬೇಕಾಗುತ್ತಿರುತ್ತದೆ ಎಂದು ನಂಬಿಸಿ ಬೇರೆಡೆಗೆ ತೆರಳಿ ಮತ್ತೊಂದು ಮದುವೆಯಾಗುತ್ತಿದ್ದ. ಶಿವಶಂಕರ್ ವಿರುದ್ದ ಈಗಾಗಲೇ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪೊಲೀಸರು ಆತನ ವಿರುದ್ದ ಕ್ರಮ ವಹಿಸುತ್ತಿಲ್ಲ. ಆತನಿಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯ ನೀಡಬೇಕು ಎಂದು ಸಂತ್ರಸ್ತ ಮಹಿಳೆಯರು ಆಗ್ರಹಿಸಿದ್ದಾರೆ. ಮದುವೆ ಹೆಸರಲ್ಲಿ ಸುಮಾರು 60 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ನೀಡಿರುವುದಾಗಿ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.