ನವದೆಹಲಿ, ಜು 14 (DaijiworldNews/MS) :ಇನ್ನು ಮುಂದೆ ಲೋಕಸಭಾ ಮತ್ತು ರಾಜ್ಯಸಭಾ ಅಧಿವೇಶನದಲ್ಲಿ ಸದಸ್ಯರು ಏನೇ ಮಾತನಾಡಲು ನಿಂತಾಗ ಯೋಚಿಸಿ ಮಾತನಾಡಬೇಕಾಗುತ್ತದೆ.
ಸದನದ ಕಲಾಪದ ವೇಳೆ ಒಂದಷ್ಟು ಅಸಂವಿಧಾನಿಕ ಪದಗಳನ್ನು ಬಳಸಿ ಆಡಳಿತ - ವಿರೋಧ ಪಕ್ಷಗಳ ನಡುವೆ ಆರೋಪ - ಪ್ರತ್ಯಾರೋಪ ಮಾಡುವುದು ಸಾಮಾನ್ಯ. ಆದರೆ ಇನ್ನುಮುಂದೆ ಸಂಸತ್ತಿನ ಉಭಯ ಸದನಗಳಲ್ಲಿ ಭ್ರಷ್ಟ, ನಾಚಿಗೆಗೇಡು, ನಿಂದನೆ ಮುಂತಾದ ಪದಗಳನ್ನು ಬಳಕೆ ಮಾಡುವಂತಿಲ್ಲ. ಏಕೆಂದರೆ, ಸಂಸತ್ತು ಕಾರ್ಯಾಲಯವು ಈ ಪದಗಳನ್ನು ʼಅಸಂವಿಧಾನಿಕ ಪದʼಗಳೆಂದು ಘೋಷಿಸಿ ಕಲಾಪದ ರೂಲ್ ಬುಕ್ನಲ್ಲಿ ಸೇರ್ಪಡೆಗೊಳಿಸಿದೆ.
'ಅರಾಜಕತಾವಾದಿ', 'ಶಕುನಿ', 'ಸರ್ವಾಧಿಕಾರಿ' 'ವಿನಾಶ್ ಪುರುಷ', 'ಖಾಲಿಸ್ತಾನಿ','ಖೂನ್ ಸೆ ಖೇತಿ(ರಕ್ತದಿಂದ ವ್ಯವಸಾಯ) ’, ‘ನಿಕಮ್ಮ’(ನಿಷ್ಪ್ರಯೋಜಕ), ‘ನೌಟಂಕಿ’, ಹೀಗೆ ಹಲವು ಪದಗಳನ್ನು ಅಸಂಸದೀಯ ಅಭಿವ್ಯಕ್ತಿ ಪದ ಎಂದು ಪಟ್ಟಿ ಮಾಡಿದೆ.
ಚರ್ಚೆಯ ಸಮಯದಲ್ಲಿ ಅಥವಾ ಉಭಯ ಸದನಗಳಲ್ಲಿ ಸದಸ್ಯರು ಈ ಪದ ಬಳಸಿದರೆ ಅವರನ್ನು ಕಲಾಪದಿಂದ ಹೊರಹಾಕಲಾಗುತ್ತದೆ.
ಮುಂದಿನ ಸೋಮವಾರದಿಂದ ಪ್ರಾರಂಭಗೊಳ್ಳುವ ಲೋಕಸಭಾ ಮತ್ತು ರಾಜ್ಯಸಭಾ ಅಧಿವೇಶನದಲ್ಲಿ ಈ ಹೊಸ ನಿಯಮಗಳು ಅನ್ವಯವಾಗಲಿದೆ. ಸಂಸದೀಯ ವ್ಯವಹಾರಗಳ ಇಲಾಖೆಯ ಈ ತೀರ್ಮಾನಕ್ಕೆ ಪ್ರತಿಪಕ್ಷಗಳಿಂದ ಅಪಸ್ವರ ವ್ಯಕ್ತವಾಗುತ್ತಿದೆ.