ಮುಂಬೈ, ಜು 14 (DaijiworldNews/DB): ಮಗು ಮತ್ತು ವೃತ್ತಿ ಜೀವನದ ಬಗ್ಗೆ ಆಯ್ಕೆ ಮಾಡಲು ಮಹಿಳೆಯಲ್ಲಿ ಕೇಳಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಗಳೊಂದಿಗೆ ಪೋಲೆಂಡ್ಗೆ ಸ್ಥಳಾಂತರಗೊಳ್ಳಲು ನಿರಾಕರಣೆ ಮಾಡಿಆದೇಶಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ.
ಪುಣೆಯ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಮಹಿಳೆ ಪ್ರಾಜೆಕ್ಟ್ ನೀಡುವ ಸಲುವಾಗಿ ಕಂಪೆನಿ ಆಫರ್ ಮೇರೆಗೆ ಮಗಳೊಂದಿಗೆ ಪೋಲೆಂಡ್ಗೆ ಹೋಗಲು ತಯಾರಿ ನಡೆಸಿದ್ದಾಗ ಅವರ ಪತಿ ಇದನ್ನು ವಿರೋಧಿಸಿದ್ದರು. ಇದು ಮಗಳನ್ನು ತನ್ನಿಂದ ದೂರ ಮಾಡುವ ಪ್ರಯತ್ನ ಮತ್ತು ಅವಳನ್ನು ಒಮ್ಮೆ ದೂರ ಮಾಡಿದರೆ ಮತ್ತೆ ನೋಡಲು ಸಾಧ್ಯವಿಲ್ಲ ಎಂದಿದ್ದರು. ಪತಿಯ ವಿರೋಧದ ಹಿನ್ನೆಲೆಯಲ್ಲಿ ಮಹಿಳೆಯು ಪೋಲೆಂಡ್ನ ಕ್ರಾಕೋವ್ಗೆ ಸ್ಥಳಾಂತರಗೊಳ್ಳಲು ಅನುಮತಿ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯವು ಪೋಲೆಂಡ್ಗೆ ತೆರಳುವುದನ್ನು ನಿರಾಕರಿಸಿ ಆದೇಶಿಸಿದ್ದ ಕಾರಣ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ಏಕಸದಸ್ಯ ಪೀಠವು ಯಾವುದೇ ನ್ಯಾಯಾಲಯವು ಮಹಿಳೆಯ ವೃತ್ತಿಜೀವನದ ಭವಿಷ್ಯ ನಿರಾಕರಿಸುವುದು ಸಾಧ್ಯವಿಲ್ಲ. ಮಗು ಮತ್ತು ವೃತ್ತಿ ಜೀವನದ ಬಗ್ಗೆ ಆಯ್ಕೆ ಮಾಡಲು ಆಕೆಯಲ್ಲಿ ಕೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಆದರೆ ಪ್ರತಿ ರಜಾದಿನಗಳಲ್ಲಿ ಮಹಿಳೆ ತನ್ನ ಮಗಳೊಂದಿಗೆ ಭಾರತಕ್ಕೆ ಹಿಂತಿರುಗಬೇಕು. ಇದು ತಂದೆಗೆ ಮಗಳ ಭೇಟಿಗೆ ಸಹಕಾರಿಯಾಗುತ್ತದೆ ಎಂದು ಪೀಠ ನಿರ್ದೇಶಿಸಿತು. ಅರ್ಜಿದಾರ ಮಹಿಳೆ ಮಗುವಿನ ಜನನದಿಂದಲೂ ಕಾಳಜಿ ವಹಿಸಿ ಬೆಳೆಸಿದ್ದಾರೆ. ದುಡಿಯುವ ಜೊತೆಗೆ ಮಗಳನ್ನು ತಾಯಿ ಇಲ್ಲಿಯವರೆಗೆ ಏಕಾಂಗಿಯಾಗಿ ಬೆಳೆಸಿದ ಕಾರಣ ಮತ್ತು ಆಕೆಯ ವಯಸ್ಸನ್ನು ಪರಿಗಣನೆಗೆ ತೆಗೆದುಕೊಂಡರೆ ಆಕೆ ತಾಯಿಯೊಂದಿಗೆ ತೆರಳುವುದು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಗಳು ವಿದೇಶಕ್ಕೆ ಹೋದರೆ ಭಯಗೊಳ್ಳುತ್ತಾಳೆಂಬ ತಂದೆಯ ವಾದವನ್ನು ಕೋರ್ಟ್ ನಿರಾಕರಿಸಿತು.