ನವದೆಹಲಿ, ಜು 13 (DaijiworldNews/DB): ಅಕ್ರಮ ಮನೆಗಳ ನೆಲಸಮ ಮಾಡಲು ಬುಲ್ಡೋಜರ್ ಬದಲು ಓಮ್ನಿ ಬಸ್ ಕೊಂಡೊಯ್ದು ಕಾರ್ಯಾಚರಣೆಗಿಳಿಯಿರಿ ಎಂದು ಆದೇಶಿಸಲು ಸಾಧ್ಯವಾಗುತ್ತದೆಯೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಉತ್ತರ ಪ್ರದೇಶದಲ್ಲಿ ಅಕ್ರಮ ಮನೆಗಳ ನೆಲಸಮ ವಿರುದ್ದ ಕೆಲವು ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸಂಘಟನೆ ಪರ ವಾದಿಸುತ್ತಿರುವ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಅವರು, ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿಸಿಕೊಂಡು ಕಾನೂನು ಮೀರಿ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ. ಆದರೆ ಇತರ ಸಮುದಾಯದವರ ಮನೆಗಳನ್ನು ನಾಮ್ಕೇವಾಸ್ತೆ ನೆಲಸಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಸೂಕ್ತ ಕ್ರಮ ಆಗಬೇಕು. ಅಲ್ಲದೆ ಕಕ್ಷಿದಾರರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.
ನಿರ್ದಿಷ್ಟ ಸಮುದಾಯ ಎಂದು ಹಿರಿಯ ನ್ಯಾಯಾವಾದಿಗಳು ಉಲ್ಲೇಖಿಸಿದ್ದಕ್ಕೆ ಗರಂ ಆದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಪಿ.ಎಸ್. ನರಸಿಂಹ ಅವರಿದ್ದ ಪೀಠ, ಭಾರತದಲ್ಲಿ ಭಾರತೀಯ ಸಮುದಾಯ ಮಾತ್ರವೇ ಇರುವುದು. ಸಂವೇದನಾರಹಿತ ಹೇಳಿಕೆಗಳನ್ನು ಅನಾವಶ್ಯಕವಾಗಿ ಹೇಳುವುದು ಸರಿಯಲ್ಲ. ಎಲ್ಲರೂ ಕಾನೂನು ಪಾಲನೆ ಮಾಡಬೇಕು. ನಾವೇನು ಬುಲ್ಡೋಜರ್ ಬದಲು ಓಮ್ನಿ ಬಸ್ ಮೂಲಕ ಅಕ್ರಮ ಮನೆಗಳನ್ನು ನೆಲಸಮಗೊಳಿಸಿ ಎಂದು ಆದೇಶಿಸಲು ಆಗುವುದಿಲ್ಲ ಅಲ್ಲವೇ ಎಂದು ಪ್ರಶ್ನಿಸಿತು. ಬಳಿಕ ವಿಚಾರಣೆಯನ್ನು ಕೋರ್ಟ್ ಮುಂದೂಡಿತು.