ಬೆಂಗಳೂರು, ಜು 13 (DaijiworldNews/DB): ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಸಿದ್ದರಾಮೋತ್ಸವಕ್ಕೆ ಸ್ವಪಕ್ಷದವರಿಂದಲೇ ಅಸಮಾಧಾನಗಳು ವ್ಯಕ್ತವಾಗಿವೆ. ಸಂಸದ ಡಿ.ಕೆ. ಸುರೇಶ್ ಅವರೂ ಈ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಸಿದ್ದರಾಮಯ್ಯನವರಿಗೆ ಇದು ಇಷ್ಟವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ವ್ಯಕ್ತಿಪೂಜೆ ಆಗಾಗ ನಡೆಯುತ್ತಿರುವುದು ಸತ್ಯ. ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಪಕ್ಷದ ವರ್ಚಸ್ಸಿಗೆ ಯಾವುದೇ ತೊಂದರೆ ಆಗಬಾರದು ಎಂದು ಸಿದ್ದರಾಮೋತ್ಸವ ಸಮಿತಿ ಸದಸ್ಯರಿಗೆ ಡಿ.ಕೆ. ಸುರೇಶ್ ಸಲಹೆ ನೀಡಿದ್ದಾರೆ.
ಯಾವುದೇ ವ್ಯಕ್ತಿಯನ್ನು ವೈಭವೀಕರಿಸುವುದಾಗಲೀ, ಬಿಂಬಿಸುವುದಾಗಲೀ ಸರಿಯಲ್ಲ. ಇದು ಚುನಾವಣೆ ವರ್ಷವಾದ್ದರಿಂದ ನಾಯಕತ್ವ, ಪಕ್ಷದಲ್ಲಿ ಆಂತರಿಕವಾಗಿಯೂ ಸಮಸ್ಯೆ ತಂದೊಡ್ಡಬಹುದು. ಅಂತಹ ಸಮಸ್ಯೆಗಳಾಗದಂತೆ ಜಾಗರೂಕತೆ ವಹಿಸಬೇಕು ಎಂದವರು ತಿಳಿಸಿದ್ದಾರೆ.
ಸಿದ್ದರಾಮೋತ್ಸವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೂ ಅಸಮಾಧಾನ ಇದೆ ಎನ್ನಲಾಗುತ್ತಿದೆ. ಅಲ್ಲದೆ, ಇಂದು ನಡೆದ ಪೂರ್ವಭಾವಿ ಸಭೆಗೆ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಅವರು ಗೈರಾಗಿದ್ದರು.