ನವದೆಹಲಿ, ಜು 13 (DaijiworldNews/DB): ನಮ್ಮೆದುರಿಗಿರುವ ಯಾವುದೇ ವಸ್ತುಗಳ ಸೌಂದರ್ಯ ಹೇಗಿರುತ್ತದೆ ಎಂಬುದು ನಾವು ನೋಡುವ ದೃಷ್ಟಿಕೋನದಲ್ಲಿ ಇರುತ್ತದೆ. ಶಾಂತ ಮತ್ತು ಕೋಪವೂ ಅದೇ ರೀತಿಯಾಗಿರುತ್ತದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಹೊಸ ಸಂಸತ್ ಭವನದ ಛಾವಣಿಯ ಮೇಲೆ ಸ್ಥಾಪಿಸಲಾಗಿರುವ ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಲಾಗಿದೆ ಎಂಬ ವಿಪಕ್ಷಗಳ ಟೀಕೆಗೆ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಅವರು, ಸಾರನಾಥದಲ್ಲಿರುವ ಸಿಂಹಗಳು ಹಾಗೂ ಸಂಸತ್ ಭವನದ ಸಿಂಹಗಳ ನಡುವಿನ ವ್ಯತ್ಯಾಸಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾರನಾಥದ ಅಶೋಕ ಸ್ತಂಭದಲ್ಲಿರುವ ಲಾಂಛನದ ಎತ್ತರ ಕೇವಲ 1.6 ಮೀಟರ್ ಮತ್ತು ಇದು ನೆಲದ ಮಟ್ಟದಲ್ಲಿದೆ. ಆದರೆ ಹೊಸ ಸಂಸತ್ ಭವನದ ಮೇಲೆ ನಿರ್ಮಿಸಲಾಗಿರುವ ರಾಷ್ಟ್ರ ಲಾಂಛನದ ಎತ್ತರ 6.5 ಮೀಟರ್. ಎತ್ತರ ಹೊಂದಿದ್ದು, 33 ಮೀಟರ್ ಎತ್ತರದಲ್ಲಿದೆ. ಸಾರನಾಥದಲ್ಲಿರುವ ಲಾಂಛನದಷ್ಟೇ ಎತ್ತರದ ಲಾಂಛನವನ್ನು ಹೊಸ ಕಟ್ಟಡದಲ್ಲಿಯೂ ಇರಿಸಿದರೆ ಬಹುದೂರದವರೆಗೆ ಅದು ಗೋಚರಿಸುವುದಿಲ್ಲ. ಆರೋಪ ಹೊರಿಸುವ ’ತಜ್ಞರು’ ಇದನ್ನು ಮೊದಲು ತಿಳಿದು ನಂತರ ಮಾತನಾಡಬೇಕು ಎಂದವರು ತಿಳಿಸಿದ್ದಾರೆ.
ಕೋನ, ಎತ್ತರ, ಪ್ರಮಾಣದ ಪ್ರಭಾವ ಎರಡೂ ರಚನೆಗಳಲ್ಲಿಯೂ ಶ್ಲಾಘನೀಯ. ಆದರೆ ಸಾರನಾಥದ ಲಾಂಛನವನ್ನು ಕೆಳಭಾಗದಿಂದ ನೋಡಿದರೆ ಅದು ಶಾಂತವಾಗಿ ಅಥವಾ ಕೋಪದಿಂದ ಕಾಣುತ್ತದೆ. ಹೊಸ ಲಾಂಛನವನ್ನು ಮೂಲ ಗಾತ್ರಕ್ಕೆ ಇಳಿಸಿದರೆ ಎರಡರಲ್ಲೂ ಯಾವ ವ್ಯತ್ಯಾಸ ಕಾಣುವುದಿಲ್ಲ ಎಂದವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಪರಿಶುದ್ಧ ಕಂಚಿನಿಂದ ನಿರ್ಮಾಣವಾಗಿರುವ 9500 ಕೆಜಿ ತೂಕದ ರಾಷ್ಟ್ರ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆಗೊಳಿಸಿದ್ದರು.