ಲಕ್ನೋ, ಜು 13 (DaijiworldNews/DB): ಮಗ ಸಾಕಿದ ಸಾಕುನಾಯಿಯು ಆತನ ತಾಯಿಯನ್ನೇ ಬಲಿ ಪಡೆದ ಘಟನೆ ಉತ್ತರಪ್ರದೇಶದ ಲಕ್ನೋದ ಕೈಸರ್ ಭಾಗ್ನಲ್ಲಿ ನಡೆದಿದೆ.
ನಿವೃತ್ತ ಶಿಕ್ಷಕಿ ಸುಶೀಲಾ ತ್ರಿಪಾಟಿ ನಾಯಿ ಕಡಿತಕ್ಕೊಳಗಾಗಿ ಮೃತಪಟ್ಟವರು. ಜಿಮ್ ಟ್ರೈನರ್ ಆಗಿರುವ ಸುಶೀಲಾ ಅವರ ಪುತ್ರ ಅಮಿತ್ ಮನೆಯಲ್ಲಿ ಮೂರು ವರ್ಷಗಳ ಹಿಂದೆ ಬ್ರೌನಿ ಹೆಸರಿನ ಪಿಟ್ಬುಲ್ ನಾಯಿಯನ್ನು ಮನೆಗೆ ತಂದಿದ್ದರು. ಅತ್ಯಂತ ಪ್ರೀತಿಯಿಂದ ಮನೆಯ ಸದಸ್ಯರಂತೆಯೇ ಈ ನಾಯಿಯನ್ನು ಸಾಕಲಾಗಿತ್ತು. ಸುಶೀಲಾ ಕೂಡಾ ನಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ವೃದ್ದೆ ಸುಶೀಲಾ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ನಾಯಿ ಅವರ ಮೇಲೆ ದಾಳಿ ನಡೆಸಿ ಕಚ್ಚಿ ಕೊಂದು ಹಾಕಿದೆ. ಮನೆಯಿಂದ ಹೊರ ಹೋಗಿದ್ದ ಪುತ್ರ ಅಮಿತ್ ಮನೆಗೆ ಮರಳಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಕಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸುಶೀಲಾ ಅವರ ಕುತ್ತಿಗೆಯಲ್ಲಿ 12 ಗಂಭೀರ ಗಾಯವಾಗಿರುವುದು ಗೊತ್ತಾಗಿದೆ.
ಇನ್ನು ಸುಶೀಲಾರಿಗೆ ನಾಯಿ ಕಚ್ಚುವ ಮುನ್ನ ಅವರು ಚೀರಾಡುವ ಧ್ವನಿ ಅಕ್ಕಪಕ್ಕದವರಿಗೆ ಕೇಳಿದ್ದು, ಓಡಿ ಬಂದಿದ್ದಾರೆ. ಆದರೆ ಮನೆಗೆ ಬಂದು ನೋಡುವಾಗ ಒಳಗಿನಿಂದ ಮನೆ ಲಾಕ್ ಆಗಿತ್ತು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ ಎನ್ನಲಾಗಿದೆ.