ಬೆಂಗಳೂರು, ಜು 13 (DaijiworldNews/DB): ಯಾವ ಉತ್ಸವವೂ ನನಗೆ ಅಗತ್ಯವಿಲ್ಲ. ಪಕ್ಷದ ಉತ್ಸವ ನಡೆದರೆ ನನಗಷ್ಟೇ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಡಿಕೆಶಿ ಉತ್ಸವ ಮಾಡಬೇಕೆಂಬ ಬೆಂಬಲಿಗರ ಒತ್ತಾಯದ ಕುರಿತು ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ವ್ಯಕ್ತಿ ಪೂಜೆ ನನಗೆ ಇಷ್ಟವಿಲ್ಲ. ಪಕ್ಷ ಪೂಜೆಯೇ ನಡೆಯಬೇಕು ಹೊರತು ವ್ಯಕ್ತಿಪೂಜೆ ಬೇಡ ಎಂಬುದಾಗಿ ನಾನು ಅಧಿಕಾರ ವಹಿಸಿಕೊಂಡ ದಿನದಂದೇ ಹೇಳಿದ್ದೇನೆ. ನನ್ನ ಹೆಸರಿನಲ್ಲಿ ಯಾವ ಉತ್ಸವವನ್ನೂ ಮಾಡುವುದು ಬೇಡ. ಯಾರೋ ಅಭಿಮಾನಿಗಳು ಶಿವಕುಮಾರೋತ್ಸವ ಮಾಡಬೇಕೆಂದು ಪತ್ರ ಬರೆದರೆ ನಾನದನ್ನು ಒಪ್ಪಬೇಕೆಂದಿಲ್ಲ. ಅಂತಹ ಯಾವುದೇ ಉತ್ಸವಗಳು ನನ್ನ ಹೆಸರಿನಲ್ಲಿ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನಲ್ಲಿ ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ ಇತರ ನಾಯಕರ ಉತ್ಸವಗಳನ್ನು ನಡೆಸಲು ಅಭಿಮಾನಿಗಳು ಮುಂದಾಗುತ್ತಿದ್ದಾರೆ. ಆದರೆ ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.