ಬೆಂಗಳೂರು, ಜು 13 (DaijiworldNews/DB): ಬಿಎಸ್ವೈ ಅವರೊಂದಿಗೆ ಸೌಹಾರ್ದದ ಭೇಟಿ ಮಾಡಿದ್ದೇನೆಯೇ ಹೊರತು ರಾಜಕೀಯದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಇಂದು ಗುರುಪೂರ್ಣಿಮೆ. ಹಿರಿಯರ ಆಶೀರ್ವಾದ ಪಡೆಯುವ ಉದ್ದೇಶದಿಂದ ಬಿಎಸ್ವೈ ಭೇಟಿಯಾಗಿದ್ದೇನೆ. ಅವರು ನಮ್ಮ ಸಮಾಜದ ಮುಖಂಡರ, ಹಿರಿಯರು ಕೂಡಾ. ಅವರಿಂದ ಮಾರ್ಗದರ್ಶನ ಪಡೆದಿದ್ದೇನೆ. ಇದರ ಹೊರತು ಬೇರೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ನೀಡಬೇಬೇಕೆಂಬುದು ಬಿಎಸ್ವೈ ಆಸಕ್ತಿಯಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಪ್ರಸ್ತುತ ಸಿಎಂ ಬೊಮ್ಮಾಯಿಯವರು ಎಲ್ಲಾ ಅಡೆತಡೆ ನಿವಾರಿಸಿ ಅದನ್ನು ನೆರವೇರಿಸುತ್ತಾರೆಂಬ ಭರವಸೆ ಇದೆ. ಇತರ ಸಮುದಾಯಗಳಿಗೆ ತೊಂದರೆಯಾಗದಂತೆ ಪಂಚಮಸಾಲಿ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳುವರೆಂಬ ವಿಶ್ವಾಸವಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಕೆಶಿ ಉತ್ಸವಕ್ಕೆ ಬೆಂಬಲಿಗರು ಒತ್ತಾಯಿಸುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಉತ್ಸವ ಕುರಿತು ನನಗೇನು ಗೊತ್ತಿಲ್ಲ. ಸಿದ್ದರಾಮಯ್ಯ ಅವರದು 75ವರ್ಷಗಳ ಸಾರ್ಥಕ್ಯದ ಹಿನ್ನೆಲೆಯಲ್ಲಿ ನಾವೆಲ್ಲಾ ಸೇರಿ ಉತ್ಸವ ಮಾಡುತ್ತಿದ್ದೇವೆ. ಆ ಸಮಿತಿಯಲ್ಲಿ ನಾನೂ ಇದ್ದು, ಇಂದಿನ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.