ಗುಂಟೂರು, ಜು 13 (DaijiworldNews/DB): ಸಾಲದ ಆ್ಯಪ್ ಆಪರೇಟರ್ಗಳ ಕಿರುಕುಳದ ತಾಳಲಾರದೆ ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಗುಂಟೂರು ಜಿಲ್ಲೆಯ ಮಂಗಳಗಿರಿ ಮಂಡಲದ ಚಿನ್ನಕಾಕನಿ ಗ್ರಾಮದ ನಿವಾಸಿ ಬಂಡಪಲ್ಲಿ ಪ್ರತ್ಯುಷಾ ಆತ್ಮಹತ್ಯೆಗೆ ಶರಣಾದವರು. ಪ್ರತ್ಯೂಷಾ ಇಂಡಿಯನ್ ಬುಲ್ಸ್ ಮತ್ತು ರುಪೆಕ್ಸ್ ಸಾಲದ ಆ್ಯಪ್ನಲ್ಲಿ 20 ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಆದರೆ ಇದಕ್ಕೆ ಅತ್ಯಧಿಕ ಬಡ್ಡಿ ದರ ವಿಧಿಸಿ ಆಪರೇಟರ್ಗಳು ಪ್ರತ್ಯೂಷಾರಿಂದ ಎರಡು ಲಕ್ಷ ರೂ. ವಸೂಲಿ ಮಾಡಿದ್ದರು. ಇಷ್ಟಾದರೂ ಬಿಡದ ಆಪರೇಟರ್ಗಳು ಪ್ರತ್ಯೂಷಾ ಇನ್ನೂ ಸಾಲ ತೀರಿಸಿಲ್ಲ ಎಂದು ತಮ್ಮ ಸೈಬರ್ ಕ್ರಿಮಿನಲ್ ಚಟುವಟಿಕೆಗಳ ಮೂಲಕ ಹಣಕ್ಕಾಗಿ ಆಕೆಯನ್ನು ಪೀಡಿಸತೊಡಗಿದ್ದರು. ಸಾಲ ಮರು ಪಾವತಿಸದೇ ಇದ್ದಲ್ಲಿ ಸಂಬಂಧಿಕರಿಗೆ ತಿಳಿಸಲಾಗುವುದು, ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೋ ಹರಿಯಬಿಡಲಾಗುವುದು ಎಂಬ ಬೆದರಿಕೆಗಳನ್ನೊಡ್ಡಿದ್ದರು. ಅಲ್ಲದೆ ವಾಟ್ಸಾಪ್ನಲ್ಲಿಯೂ ಅಶ್ಲೀಲ ಸಂದೇಶ ರವಾನಿಸಿ ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದರು. ಇದರಿಂದ ತೀವ್ರ ನೊಂದ ಪ್ರತ್ಯೂಷಾ ಸೆಲ್ಪೀ ವೀಡಿಯೋ ಮಾಡಿ ಘಟನೆಯ ಇಂಚಿಂಚೂ ಮಾಹಿತಿಯನ್ನು ಪೋಷಕರಿಗೆ ಮತ್ತು ಪತಿಗೆ ಕಳುಹಿಸಿ ಮನೆಯ ಮೇಲಿರುವ ಫ್ಲೆಕ್ಸ್ ಹೋರ್ಡಿಂಗ್ ಫ್ರೇಮ್ಗೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಕಳೆದ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೂಡಲೇ ಪ್ರತ್ಯೂಷಾ ಪತಿ ಮಂಗಳಗಿರಿ ಪೊಲೀಸ್ ಠಾಣೆಗೆ ತೆರಳಿ ಸಾಲದ ಆ್ಯಪ್ ಮತ್ತು ಏಜೆಂಟ್ಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆ ಅಡಿಯಲ್ಲಿರುವ ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.