ಕಚ್, ಜು 13(DaijiworldNews/MS): ಒಂದೆರಡು ಕೋಟಿಯಲ್ಲ, ಬರೋಬ್ಬರಿ 376.5 ಕೋಟಿ ಮೌಲ್ಯದ 75.3 ಕೆಜಿ ಮಾದಕ ವಸ್ತು ಶುದ್ದವಾದ ಹೆರಾಯಿನ್ ಅನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಛ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ಕಂಟೈನರ್ನಿಂದ ವಶಪಡಿಸಿಕೊಂಡಿದ್ದಾರೆ.
ಸುಲಭದಲ್ಲಿ ಯಾರಿಗೂ ಪತ್ತೆ ಹಚ್ಚದಂತೆ ಹೆರಾಯಿನ್ ಅನ್ನು ಫ್ಯಾಬ್ರಿಕ್ ರೋಲ್ಗಳ ಒಳಗೆ ಅಡಗಿಸಿಡಲಾಗಿತ್ತು. ಬರೋಬ್ಬರಿ 376.5 ಕೋಟಿ ಮೌಲ್ಯದ ಹೆರಾಯಿನ್ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು.
ಸುಮಾರು ಎರಡೂವರೆ ತಿಂಗಳ ಹಿಂದೆ ಮುಂದ್ರಾ ಬಂದರಿಗೆ ಆಗಮಿಸಿದ ಹಡಗಿನ ಕಂಟೈನರ್ ಒಂದರಲ್ಲಿ ಡ್ರಗ್ಸ್ ಇರುವ ಅನುಮಾನಗಳಿದ್ದು ಅದನ್ನು ಪಂಜಾಬ್ಗೆ ತಲುಪಿಸಲು ಉದ್ದೇಶಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಇತ್ತೀಚೆಗೆ ಗುಜರಾತ್ ಎಟಿಎಸ್ಗೆ ಸುಳಿವು ನೀಡಿದ್ದರು. ಮಾಹಿತಿ ಪಡೆದ ಗುಜರಾತ್ ಎಟಿಎಸ್ ತಂಡವು ಪಂಜಾಬ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜೊತೆಗೆ ಮುಂದ್ರಾಗೆ ತಲುಪಿ ಬಂದರಿನ ಬಳಿಯ ಕಂಟೇನರ್ ಸರಕು ಸಾಗಣೆ ನಿಲ್ದಾಣದಲ್ಲಿ ಇರಿಸಲಾಗಿದ್ದ ಶಂಕಿತ ಕಂಟೇನರ್ ಅನ್ನು ಪತ್ತೆ ಮಾಡಿದೆ.
ಯುಎಇಯ ಅಜ್ಮಾನ್ ಫ್ರೀ ಝೋನ್ ನಿಂದ ಈ ಕಂಟೆನೈರ್ ಮೇ 13 ರಂದು ಮುಂದ್ರಾ ಬಂದರಿಗೆ ರವಾನಿಸಲಾಗಿತ್ತು.
ಕಂಟೈನರ್ ನಲ್ಲಿಟ್ಟಿದ್ದ 540 ಫ್ಯಾಬ್ರಿಕ್ ರೋಲ್ ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದರಲ್ಲಿ 64ರಲ್ಲಿ ಹೆರಾಯಿನ್ ಪೌಡರ್ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಗುಜರಾತ್ ಡಿಜಿಪಿ ಆಶಿಶ್ ಭಾಟಿಯಾ , “ಯುಎಇ ನಿಂದ ಕಳುಹಿಸಲಾಗಿದ್ದ ನಿಷೇಧಿತ ಡ್ರಗ್ಸ್ ಪಂಜಾಬ್ಗೆ ಸಾಗಿಸಲು ಉದ್ದೇಶಿಸಲಾಗಿತ್ತು. ರಟ್ಟಿನಿಂದ ಮಾಡಿದ ಉದ್ದವಾದ ಸಿಲಿಂಡರಾಕಾರದ ಪೈಪ್ಗಳ ಮೇಲೆ (ಫ್ಯಾಬ್ರಿಕ್ ) ಬಟ್ಟೆಯನ್ನು ಸುತ್ತಲಾಗಿತ್ತು. ಡ್ರಗ್ ಡೀಲರ್ ಗಳು ರಟ್ಟಿನ ಪೈಪ್ ಮೇಲೆ ಪ್ಲಾಸ್ಟಿಕ್ ಪೈಪ್ ಹಾಕಿ ಕುಳಿ ಸೃಷ್ಟಿಸಿದ್ದರು. ಹೆರಾಯಿನ್ ಅನ್ನು ಕುಳಿಯಲ್ಲಿ ತುಂಬಿಸಿ ನಂತರ ಕಾರ್ಬನ್ ಟೇಪ್ಗಳನ್ನು ಬಳಸಿ ಬಿಗಿಯಾಗಿ ಮುಚ್ಚಿದ್ದರು. ಇದರಿಂದ ಅದು ಎಕ್ಸ್-ರೇ ತಪಾಸಣೆಯಲ್ಲಿ ಪತ್ತೆಯಾಗುವುದಿಲ್ಲ, ”ಎಂದು ಹೇಳಿದ್ದಾರೆ