ಬೆಳಗಾವಿ, ಜು 13 (DaijiworldNews/DB): ಬೈಕ್ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಚಿತ್ರ ನಟ ಶಿವರಂಜನ್ ಬೋಳಣ್ಣವರ ಅವರ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಆದರೆ ಅದೃಷ್ಟವಶಾತ್ ಯಾವುದೇ ಗುಂಡು ತಾಗದೆ ಶಿವರಂಜನ್ ಅಪಾಯದಿಂದ ಪಾರಾಗಿದ್ದಾರೆ.
ಬೈಲಹೊಂಗಲ ಪಟ್ಟಣದ ಹನುಮಂತ ದೇವಸ್ಥಾನದ ಬಳಿ ಶಿವರಂಜನ್ ಬೋಳಣ್ಣವರ ಅವರ ಹಳೆಯ ಮನೆ ಇದ್ದು, ಈ ಮನೆ ಬಳಿ ಘಟನೆ ನಡದಿದೆ. ಸುಮಾರು ಮೂರ್ನಾಲ್ಕು ಸುತ್ತು ಫೈರಿಂಗ್ ನಡೆಸಿ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ. ಆದರೆ ಯಾವುದೇ ಗುಂಡು ತಗುಲದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಸಂಪೂರ್ಣ ಚಿತ್ರಣ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಹೋದರ ಸಂಬಂಧಿಯೇ ಇದನ್ನು ಮಾಡಿರಬಹುದು ಎಂದು ಶಂಕಿಸಲಾಗಿದ್ದು, ನಿಖರ ಮಾಹಿತಿ ತಿಳಿದು ಬಂದಿಲ್ಲ. ಶಿವರಂಜನ್ ಅವರನ್ನೂ ಪೊಲೀಸರು ಇದೀಗ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಬೈಲಹೊಂಗಲ ಪಟ್ಟಣದ ಸುತ್ತ ಪೊಲೀಸರು ನಾಕಾಬಂಧಿ ಹಾಕಿದ್ದು, ಸಂಶಯಾಸ್ಪದ ವಾಹನಗಳನ್ನು ತಪಾಸಣೆ ನಡೆಸಿಯೇ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಲಿಂಗ ನಂದಗಾಂವಿ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.