ನಾಗ್ಪುರ, ಜು 13(DaijiworldNews/MS): ಸೇತುವೆ ದಾಟುತ್ತಿದ್ದ ಸ್ಕಾರ್ಪಿಯೋ ಪ್ರವಾಹದ ನೀರಿನಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ಘಟನೆ ನಾಗ್ಪುರ ಜಿಲ್ಲೆಯ ಕೆಲ್ವಾಡ್ ಬಳಿಯ ನಂದಗೌಮುಖ-ಛತ್ರಪುರ ರಸ್ತೆಯ ಬ್ರಹ್ಮನ್ಮರಿ ನುಲ್ಲಾದಲ್ಲಿ ಮಂಗಳವಾರ ನಡೆದಿದೆ.
ಎರಡೂ ಬದಿಗೆ ರೇಲಿಂಗ್ಸ್ ಇಲ್ಲದ ಸೇತುವೆಯನ್ನು ಎಂಟು ಜನರಿದ್ದ ಎಸ್ಯುವಿ ದಾಟುತ್ತಿತ್ತು. ಸೇತುವೆಯ ಮೇಲೆ ಹರಿಯುತ್ತಿದ್ದ ನೀರು ಕಾರನ್ನೂ ಕೊಚ್ಚಿಕೊಂಡು ಹೋದಾಗ ಇಬ್ಬರು ಸುರಕ್ಷಿತವಾಗಿ ಈಜಿ ಪಾರಾಗಿದ್ದಾರೆ. 13 ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದು ನಾಪತ್ತೆಯಾದ ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಜಲಾವೃತ ಕಾರಿನ ಕಿಟಕಿಯಿಂದ ಕೈ ಹೊರಹಾಕಿ ಕಾರಿನ ಮೇಲ್ಭಾಗವನ್ನು ಹಿಡಿದಿರುವುದು ಕಾಣಿಸುತ್ತಿದೆ. ನೂರಾರು ಮಂದಿ ನದಿದಂಡೆಯಲ್ಲಿ ನಿಂತು ಈ ದೃಶ್ಯವನ್ನು ನೋಡುತ್ತಿದ್ದು, ಮೊಬೈಲ್ನಲ್ಲಿ ಘಟನೆಯನ್ನು ಚಿತ್ರೀಕರಿಸುವಲ್ಲಿ ಅಥವಾ ಫೋಟೊ ಕ್ಲಿಕ್ಕಿಸುವಲ್ಲಿ ನಿರತರಾಗಿರುವುದು ಕಂಡುಬರುತ್ತಿದೆ.
ಅಪಘಾತಕ್ಕೀಡಾದ ಎಸ್ಯುವಿಯಲ್ಲಿದ್ದ ಪ್ರಯಾಣಿಕರನ್ನು ರೋಶ್ನಿ ಚೌಕಿಕರ್ (35), ಅವರ ಮಗ ದಾದು (13), ನೀಮು ಅತ್ನೆರೆ (45), ಮಧುಕರ್ ಪಾಟೀಲ್ (60) ಮತ್ತು ಅವರ ಪತ್ನಿ ನಿರ್ಮಲಾ (55) ಎಂದು ಗುರುತಿಸಲಾಗಿದೆ. ವಾಹನದ ಚಾಲಕ ವಿಕಾಸ್ ದಿವ್ಟೆ (35) ನಾಪತ್ತೆಯಾಗಿದ್ದಾರೆ. ಸೇತುವೆಯಿಂದ ಸುಮಾರು 700 ಮೀಟರ್ ದೂರದಲ್ಲಿ ನೀರಿನಿಂದ ಹೊರತೆಗೆದ ವಾಹನದಲ್ಲಿ ಸಿಲುಕಿದ್ದ ಪಾಟೀಲ್ ದಂಪತಿ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಪ್ರಯಾಣಿಕರು ಮಧ್ಯಪ್ರದೇಶದ ಮುಲ್ತಾಯಿಯವರು. ವಿವಾಹ ಸಮಾರಂಭಕ್ಕಾಗಿ ನಾಗ್ಪುರಕ್ಕೆ ಆಗಮಿಸಿದ್ದರು. ಮನೆಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.