ನವದೆಹಲಿ, ಜು 12 (DaijiworldNews/MS): ಸ್ಪೈಸ್ಜೆಟ್ ಸಂಸ್ಥೆಯ ವಿಮಾನ ಸಾಲು ಸಾಲು ತಾಂತ್ರಿಕ ದೋಷಗಳು ವರದಿಯಾಗುತ್ತಿರುವ ಬೆನ್ನಲ್ಲೇ ಮಂಗಳೂರು-ದುಬೈಗೆ ಹಾರಾಟ ನಡೆಸಿದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಘಟನೆ ವರದಿಯಾಗಿದೆ.
ಕಳೆದ ಕೆಲವು ವಾರಗಳಲ್ಲಿ ಸ್ಪೈಸ್ಜೆಟ್ ವಿಮಾನಗಳಲ್ಲಿ ಸಂಭವಿಸಿದ ಹಲವು ತಾಂತ್ರಿಕ ದೋಷಗಳ ನಂತರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಸೋಮವಾರ, ಜುಲೈ 11 ರಂದು, ದುಬೈನಲ್ಲಿ ಇಳಿದ ನಂತರ ವಿಮಾನದಲ್ಲಿ ಮತ್ತೊಂದು ದೋಷವನ್ನು ಗಮನಿಸಿದ್ದು ಮಂಗಳೂರಿನಿಂದ ದುಬೈಗೆ ಹಾರಿದ ಸ್ಪೈಸ್ಜೆಟ್ B737 ವಿಮಾನ ಲ್ಯಾಂಡಿಗ್ ಆದ ಬಳಿಕ ತಪಾಸಣೆಯ ಸಮಯದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು ಎಂದು ಹೇಳಿದೆ.
ಡಿಜಿಸಿಎ ಹೇಳಿಕೆಯ ಪ್ರಕಾರ, ಮಂಗಳೂರು-ದುಬೈನಿಂದ ಕಾರ್ಯನಿರ್ವಹಿಸುತ್ತಿದ್ದ ಸ್ಪೈಸ್ಜೆಟ್ B737 ವಿಮಾನ ಅನ್ನು ಲ್ಯಾಂಡಿಂಗ್ ನಂತರ ಪರಿಶೀಲಿಸಲಾಯಿತು. ವಿಮಾನದ ನೋಸ್ ಚಕ್ರದ ಸ್ಟ್ರಟ್ (ಇಳಿಯುವಾಗ ಕೆಳಗಿಳಿಯುವ ಮುಂಭಾಗದ ಚಕ್ರವನ್ನು ಹಿಡಿದಿರುವ ಸಾಧನ) ಸಾಮಾನ್ಯಕ್ಕಿಂತ ಹೆಚ್ಚು ಸಂಕುಚಿತಗೊಂಡಿರುವುದನ್ನು ಎಂಜಿನಿಯರ್ ಗಮನಿಸಿದ್ದರು ಎಂದು ಹೇಳಿದೆ.
ಸ್ಪೈಸ್ಜೆಟ್ ನಂತರ ಮುಂಬೈನಿಂದ ದುಬೈಗೆ ಮತ್ತೊಂದು ವಿಮಾನವನ್ನು ಹಿಂದಿರುಗಲು ಕಳುಹಿಸಿದ್ದು, ಇದರ ಪರಿಣಾಮವಾಗಿ ಮಧುರೈಗೆ ಹೋಗುವ ಪ್ರಯಾಣಿಕರಿಗೆ ವಿಳಂಬವಾಯಿತು ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಇದು ಸ್ಪೈಸ್ಜೆಟ್ ಸಂಸ್ಥೆಯ ವಿಮಾನದಲ್ಲಿ 24 ದಿನಗಳಲ್ಲಿ ಒಂಬತ್ತನೇ ತಾಂತ್ರಿಕ ದೋಷದ ಘಟನೆಯಾಗಿದೆ.
ಇನ್ನು ಸ್ಪೈಸ್ಜೆಟ್ ಸಂಸ್ಥೆಯ ವಿಮಾನಗಳಿಗೆ ಸಂಬಂಧಿಸಿದಂತೆ ಅಸಾಧಾರಣ ಸಂಖ್ಯೆಯ ತಾಂತ್ರಿಕ ದೋಷ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ವಿಮಾನಯಾನ ನಿಯಂತ್ರಕ ಪ್ರಾಧಿಕಾರ ಡಿಜಿಸಿಎ ವಿವರಣೆ ಕೇಳಿದೆ.