ಶಿವಮೊಗ್ಗ, ಜು 12 (DaijiworldNews/MS): ಹರ್ಷ ಹತ್ಯೆಯ ಮಾಸುವೇ ಮುನ್ನವೇ ಸೋಮವಾರ ತಡರಾತ್ರಿ ಶಿವಮೊಗ್ಗದಲ್ಲಿ ಬಜರಂಗದಳ ಸಹ ಸಂಚಾಲಕ ಹಾಗೂ ಬಿಜೆಪಿ ಮುಖಂಡ ಕಾಂತರಾಜು ಎಂಬಾತನ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್ ದುಷ್ಕರ್ಮಿಗಳ ಕೈಯಲ್ಲಿದ್ದ ಮಚ್ಚು ಕಸಿದುಕೊಂಡ ಕಾಂತರಾಜ್, ದುಷ್ಕರ್ಮಿಗಳಿಂದ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.
ರಾಜೀವ್ ಗಾಂಧಿ ಬಡಾವಣೆಯಲ್ಲಿ ಈ ದಾಳಿ ನಡೆದಿದ್ದು, ರಾತ್ರಿ 10.20ರ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಬಂದ ಕಾಂತರಾಜ್ (27) ಮೇಲೆ ನಾಲ್ಕೈದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕಾಂತರಾಜುವಿನ ಬಲಗೈ ಗೆ ಮಚ್ಚಿನಿಂದ ಏಟು ಬಿದ್ದಿದೆ. ಇದಲ್ಲದೆ ದೇಹದ ಹಲವೆಡೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್ ಮಾತನಾಡಿ, ಈಗಾಗಲೇ ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದ್ದು ಅವರ ವಿಚಾರಣೆ ನಡೆಸಲಾಗುತ್ತಿದೆ .ಬಜರಂಗದಳ ಸಂಘಟನೆ ಚಟುವಟಿಕೆಯಲ್ಲಿ ಇದ್ದಿದ್ದರಿಂದ ಈ ಹಲ್ಲೆಯಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು ವಿಚಾರಣೆ ಬಳಿಕ ಮಾಹಿತಿ ಲಭಿಸಲಿದೆ ಎಂದು ಹೇಳಿದ್ದಾರೆ.