ಮಡಿಕೇರಿ, ಜು 12 (DaijiworldNews/HR): ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಭಾರಿ ಮಳೆಯಾಗಿ ಕೊಡಗಿನಲ್ಲಿ ಅನೇಕ ನಷ್ಟ ಉಂಟಾಗಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಕುಸಿದ ಮನೆಗಳು, ಗುಡ್ಡ ಕುಸಿತದಿಂದಾದ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಇಂದಿನಿಂದ ಎರಡು ದಿನಗಳ ಕಾಲ ಸಿಎಂ ಬಸವರಾಜ್ ಬೊಮ್ಮಾಯಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿಗೆ ಭೇಟಿ ನೀಡಿ ಮಳೆಯಿಂದ ಕುಸಿದ ಮನೆಗಳು, ಗುಡ್ಡ ಕುಸಿತದಿಂದಾದ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರ ಚೆಕ್ ವಿತರಣೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಇಂದು ಸಂಜೆ ವೇಳೆಗೆ ಮಳೆಹಾನಿ ಕುರಿತು ಸ್ಪಷ್ಟ ಮಾಹಿತಿ ಸಿಗಲಿದ್ದು, ಕರಾವಳಿ ಭಾಗದಲ್ಲಿ ಹಲವೆಡೆ ಕಡಲ ಕೊರೆತದಿಂದ ಹಾಗೂ ಭಾರಿ ಮಳೆಯಿಂದಾಗಿ ತೀವ್ರ ಸಮಸ್ಯೆಯುಂಟಾಗಿದೆ. ನದಿ ಪಕ್ಕದ ಮನೆಗಳ ಸ್ಥಳಾಂತರಕ್ಕೆ ಚಿಂತನೆ ನಡೆಸಲಾಗಿದೆ. ಮಳೆಹಾನಿ ಕುರಿತ ಮೊದಲ ಹಂತದ ನಷ್ಟದ ಅಂಕಿ-ಅಂಶಗಳ ಬಗ್ಗೆ ಸಂಜೆ ಮಾಹಿತಿ ಸಿಗಲಿದೆ ಎಂದಿದ್ದಾರೆ.