ಬೆಂಗಳೂರು, ಜು 12 (DaijiworldNews/MS): ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ರಾಜಕೀಯ ಜೀವನದ ಬಲಿ ತೆಗೆಯಲು ಹೊಂಚು ಹಾಕುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, " ಅಂದು ದಲಿತ ನಾಯಕ ಪರಮೇಶ್ವರ್ ಅವರ ವಿರುದ್ಧ ಸಂಚು ನಡೆಸಿ ಬಲಿ ಹಾಕಿದರು, ಇಂದು ಡಿಕೆಶಿ ಅವರ ರಾಜಕೀಯ ಜೀವನದ ಬಲಿ ತೆಗೆಯಲು ಹೊಂಚು ಹಾಕುತ್ತಿದ್ದಾರೆ ಎಂದು ಕಿಡಿಕಾರಿದೆ.
ಕಣ್ಣರಿಯದಿದ್ದರೂ ಕರುಳರಿಯದೇ ಇರುವುದೇ, ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಅಲ್ಲಲ್ಲೇ ಕತ್ತಿ ಮಸೆಯುತ್ತಾರೆ ಎಂದು ಡಿಕೆಶಿ ಅವರ ತಾಯಿ ಅಂದೇ ಹೇಳಿದ್ದರು. ಸಿದ್ದರಾಮಯ್ಯ ಜೊತೆಗೆ ಕೈಮಿಲಾಯಿಸುವಾಗ ಹೆತ್ತ ತಾಯಿ ನೀಡಿರುವ ಎಚ್ಚರಿಕೆಯನ್ನು ಸ್ವಲ್ಪ ಗಮನಿಸಿ , "ತನ್ನ ಕೆಲಸವಾಗಬೇಕಾದರೆ ಸಿದ್ದರಾಮಯ್ಯ ನನ್ನ ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಆಮೇಲೆ ದ್ರೋಹ ಬಗೆಯುತ್ತಾರೆ". ಕೆಪಿಸಿಸಿ ಅಧ್ಯಕ್ಷರ ತಾಯಿ ಹೇಳಿದ ಮಾತು ಮತ್ತೆ ನಿಜವಾಗಲಿದೆ. ಸಿದ್ದರಾಮೋತ್ಸವದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನು ಸಿದ್ದರಾಮಯ್ಯ ಬಣ ಹರಕೆಯ ಕುರಿಯಾಗಿಸಲಿದೆ! ಎಂದು ಡಿಕೆಶಿ ಅವರ ತಾಯಿ ಅವರ ಹಳೆಯ ಹೇಳಿಕೆಯನ್ನು ಟ್ಯಾಗ್ ಮಾಡಿದೆ.
ಇಷ್ಟೆಲ್ಲ ತನ್ನ ಸುತ್ತ ನಡೆಯುತ್ತಿದ್ದರೂ, ಕೆಪಿಸಿಸಿ ಅಧ್ಯಕ್ಷರು ಅಸಹಾಯಕಡಿಕೆಶಿ ಆಗಿರುವುದು ವಿಪರ್ಯಾಸ. ಸಿದ್ದರಾಮಯ್ಯ ಎಲ್ಲಾ ಹಂತದಲ್ಲೂ ಕೆಪಿಸಿಸಿ ಅಧ್ಯಕ್ಷರನ್ನು ತುಳಿಯುತ್ತಲೇ ಬಂದಿದ್ದಾರೆ.ಪದಾಧಿಕಾರಿಗಳ ಪಟ್ಟಿ, ಪ್ರಚಾರ ಸಮಿತಿಗೆ ಅಧ್ಯಕ್ಷರ ನೇಮಕ, ಚುನಾವಣಾ ಟಿಕೆಟ್ ಎಲ್ಲವೂ ಸಿದ್ದರಾಮಯ್ಮೂಗಿನ ನೇರಕ್ಕೆ ನಡೆದು ಹೋಗಿದೆ. ಕೆಪಿಸಿಸಿ ಅಧ್ಯಕ್ಷರು ಬರೇ ರಬ್ಬರ್ ಸ್ಟ್ಯಾಂಪ್ ಅಷ್ಟೇ! ಎಂದು ವ್ಯಂಗ್ಯವಾಡಿದೆ.