ಶಿಯೋಪುರ, ಜು 12 (DaijiworldNews/HR): ಮಧ್ಯಪ್ರದೇಶದ ಶಿಯೋಪುರದಲ್ಲಿ ಚಂಬಲ್ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಹತ್ತು ವರ್ಷದ ಬಾಲಕನನ್ನು ಮೊಸಳೆ ನುಂಗಿರುವ ಘಟನೆ ನಡೆದಿದೆ.
ಮೊಸಳೆ ಬಾಲಕನನ್ನು ನದಿಗೆ ಎಳೆದೊಯ್ದ ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಆತನ ಕುಟುಂಬ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ದೊಣ್ಣೆ, ಹಗ್ಗ ಹಾಗೂ ಬಲೆಯಿಂದ ಮೊಸಳೆಯನ್ನು ಹಿಡಿದು, ಮೊಸಳೆಯನ್ನು ನದಿಯಿಂದ ಹೊರಗೆ ಎಳೆದಿದ್ದಾರೆ.
ಇನ್ನು ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ, ಮೊಸಳೆಯನ್ನು ಗ್ರಾಮಸ್ಥರ ಹಿಡಿತದಿಂದ ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಬಾಲಕನ ಕುಟುಂಬಸ್ಥರು ಇದಕ್ಕೆ ಒಪ್ಪಿರಲಿಲ್ಲ. ಮೊಸಳೆಯ ಹೊಟ್ಟೆಯಲ್ಲಿ ಮಗು ಜೀವಂತವಾಗಿರಬಹುದು. ಮಗುವನ್ನು ಉಗುಳಿದಾಗ ಮಾತ್ರ ಮೊಸಳೆಯನ್ನು ಬಿಡುತ್ತೇವೆ ಎಂದು ಹೇಳಿದ್ದರು.
ಬಳಿಕ ಪೊಲೀಸ್ ಅಧಿಕಾರಿಗಳು ಹಾಗೂ ವನ್ಯ ಜೀವಿ ಇಲಾಖೆಯವರು ಮನವೊಲಿಸಿ ಮೊಸಳೆಯನ್ನು ಗ್ರಾಮಸ್ಥರಿಂದ ಬಿಡಿಸಿದ್ದಾರೆ.