ಚೆನ್ನೈ, ಜು 11(DaijiworldNews/MS): ತಮಿಳುನಾಡು ಮಾಜಿ ಸಿಎಂ ಪನ್ನೀರ್ ಸೆಲ್ವಂ ಅವರನ್ನು ಎಐಎಡಿಎಂ ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಮೂಲಕ ತಮಿಳುನಾಡಿನ ಎಐಡಿಎಂಕೆಯಲ್ಲಿ "ಹುದ್ದೆ" ಗಾಗಿ ಹಲವು ದಿನಗಳಿಂದ ನಡೆಯುತ್ತಿದ್ದ ಗುದ್ದಾಟ ಒಂದು ಹಂತಕ್ಕೆ ಬಂದು ನಿಂತಿದೆ.
ಇಂದು ಬೆಳಿಗ್ಗೆ ಪಕ್ಷದ ಸಾಮಾನ್ಯ ಸಭೆಗೆ ಅವಕಾಶ ನೀಡಬಾರದೆಂದು ಕೋರಿ ಪನ್ನೀರ್ ಸೆಲ್ವಂ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ.
ಸಿಎಂ ಪನ್ನೀರ್ ಸೆಲ್ವಂ ಮಾತ್ರ ಅಲ್ಲದೆ ಹಿರಿಯ ನಾಯಕನ ಜೊತೆಗೆ ಒಪಿಎಸ್ ಬೆಂಬಲಿಗರಾದ ಜೆಸಿಡಿ ಪ್ರಭಾಕರ್, ಆರ್ ವೈತಿಲಿಂಗಂ ಹಾಗೂ ಪಿಎಚ್ ಮನೋಜ್ ಪಾಂಡಿಯನ್ ಕೂಡ ಎಐಎಡಿಎಂಕೆಯಿಂದ ಉಚ್ಛಾಟನೆಗೊಂಡಿದ್ದಾರೆ. ಎಐಎಡಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಆಯ್ಕೆಯಾಗಿದ್ದಾರೆ
ಈ ಘಟನೆಯ ಬಳಿಕಉಭಯ ನಾಯಕರ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ ಎನ್ನಲಾಗಿದೆ. ಪಳನಿಸ್ವಾಮಿ ಬೆಂಬಲಿಗರು ಎಐಎಡಿಎಂಕೆ ಕಚೇರಿಗೆ ನುಗ್ಗಿ ಪನ್ನೀರ್ ಸೆಲ್ವಂ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪನ್ನೀರ್ ಸೆಲ್ವಂ ಬಣದ ಕೆಲ ಕಾರ್ಯಕರ್ತರು ನೂತನ ಪ್ರಧಾನ ಕಾರ್ಯದರ್ಶಿ ಎಡಪಾಡಿ ಪಳನಿಸ್ವಾಮಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋಗಳು ವೈರಲ್ ಆಗಿವೆ
ದಿವಂಗತ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತರಾಗಿದ್ದ ಒ ಪನ್ನೀರ್ ಸೆಲ್ವ ಅವರು, ಜಯಲಲಿತಾ ಜೈಲಿಗೆ ಹೋದಾಗ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದ್ದರು. 2001 -2002, 2014-2015 ಮತ್ತು 2016-2017 ಅವಧಿಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರು.