ಬೆಂಗಳೂರು, ಜು 11(DaijiworldNews/MS): ಸಿದ್ದರಾಮೋತ್ಸವದ ಬಗ್ಗೆ ಕಾಂಗ್ರೆಸ್ಸಿನಲ್ಲಿ ಅಸಹನೆ, ಅಸಹಿಷ್ಣುತೆಯ ಅಲೆ ಜೋರಾಗಿಯೇ ಬೀಸುತ್ತಿದೆ. ಕಾಂಗ್ರೆಸ್ಸಿನಲ್ಲೀಗ ವಲಸಿಗ ಸಿದ್ದರಾಮಯ್ಯ ಆರಾಧನೆ ನಡೆಯುತ್ತಿದೆ. ಮೂಲ ಕಾಂಗ್ರೆಸ್ಸಿಗರು ಮೂಕಪ್ರೇಕ್ಷಕರಾಗಿದ್ದಾರೆ ಎಂಬುದಾಗಿ ಬಿಜೆಪಿ ರಾಜ್ಯ ಘಟಕವೂ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಬಿಜೆಪಿ, ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೋರ್ವ ಸಿಎಂ ಕುರ್ಚಿಯ ಕನಸುಗಾರ ಸಿದ್ಧರಾಮಯ್ಯ ಅವರ 'ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸಾಧನೆ'ಎಂಬ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮೂಲ ಕಾಂಗ್ರೆಸ್ಸಿಗರಿಗೆ ಈಗ ಸಿದ್ದರಾಮಯ್ಯ ಅವರ ಚಾಕರಿ ಮಾಡುವ ಸುಯೋಗ ಎಂದು ವ್ಯಂಗ್ಯವಾಡಿದೆ.
ಸಿದ್ದರಾಮಯ್ಯ ಅವರ ಬಗ್ಗೆ ಇರುವ ಅಸಮಾಧಾನವನ್ನು ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಈ ರೀತಿ ಹೊರ ಹಾಕಿದ್ದಾರೆ. ಅಧಿಕಾರದಾಹಿ ಸಿದ್ದರಾಮಯ್ಯ ವಿರುದ್ಧ ಸಹನೆಯ ಕಟ್ಟೆ ಒಡೆದಿದೆ. ಎಷ್ಟೆಂದರೂ ಹರಿಪ್ರಸಾದ್ ಮೂಲ ಕಾಂಗ್ರೆಸ್ಸಿಗ, ವಲಸಿಗ ಸಿದ್ದರಾಮಯ್ಯ ಅವರನ್ನು ಎಷ್ಟು ವರ್ಷಗಳ ಕಾಲ ಸಹಿಸಿಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸಿದೆ.