ಭೋಪಾಲ್ , ಜು 11(DaijiworldNews/MS):ಎಂಟು ವರ್ಷದ ಬಾಲಕನೊಬ್ಬ ತನ್ನ 2ವರ್ಷದ ತಮ್ಮನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕಾಯುತ್ತಾ ಕುಳಿತ ಕರುಣಾಜನಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಶನಿವಾರ ಮಧ್ಯಪ್ರದೇಶದ ಮೊರೆನಾ ಬೀದಿಯಲ್ಲಿ ಎಂಟು ವರ್ಷದ ಬಾಲಕ ತನ್ನ ಎರಡು ವರ್ಷದ ಕಿರಿಯ ಸಹೋದರನ ಶವದೊಂದಿಗೆ ಕುಳಿತಿರುವುದು ಕಂಡುಬಂದಿದೆ. ಪೂಜಾರಾಮ್ ಜಾಧವ್ ತನ್ನ ಕಿರಿಯ ಮಗ ರಾಜಾ(೨) ಮೊರೆನಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ರಕ್ತಹೀನತೆಯಿಂದಾಗಿ ಆತ ಸಾವನ್ನಪ್ಪಿದ್ದಾನೆ.
ಆಸ್ಪತ್ರೆಯಿಂದ ೩೦ ಕಿ.ಮೀ ದೂರದಲ್ಲಿರುವ ಮನೆಗೆ ಶವ ತೆಗೆದುಕೊಂಡು ಹೋಗಲು ಪೂಜಾ ರಾಮ್ ಒದ್ದಾಡಿದ್ದಾನೆ. ಬಡ ಮತ್ತು ಅಸಹಾಯಕ ಪೂಜಾರಾಮ್ ಮೃತದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಆಸ್ಪತ್ರೆಯ ಅಧಿಕಾರಿಗಳ ಮುಂದೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ. ಆಂಬುಲೆನ್ಸ್ ನಲ್ಲಿ ಮೃತದೇಹ ಸಾಗಿಸಲು ಚಾಲಕ ದುಬಾರಿ ಹಣ ಕೇಳಿದ್ದರಿಂದ ತಂದೆ ಮಗನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಪರದಾಡಿದ್ದಾರೆ. ಹೀಗಾಗಿ ಹತ್ತಿರವಿದ್ದ ಪಾರ್ಕ್ ನಲ್ಲಿ ಹಿರಿಯ ಪುತ್ರನನ್ನು ಗುಲ್ಮಾನ್ ನನ್ನು ಬಿಟ್ಟು ಬೇರೆ ಗಾಡಿ ವ್ಯವಸ್ಥೆ ಮಾಡಲು ತೆರಳಿದ್ದಾನೆ. ಗುಲ್ಶನ್ ಮೃತಪಟ್ಟ ಸೋದರನ ತಲೆಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಅರ್ಧ ಘಂಟೆಯವರೆಗೆ ತನ್ನ ತಂದೆ ಹಿಂದಿರುಗುವ ನಿರೀಕ್ಷೆಯಲ್ಲಿ ಕುಳಿತಿದ್ದನು.
ಜನಸಂದಣಿಯಿಂದ ಎಚ್ಚರಗೊಂಡ ಪೊಲೀಸ್ ಅಧಿಕಾರಿಗಳು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಚಾಲಕನನ್ನು ಪೂಜಾರಾಮ್ ಜಾಧವ್ ಅವರ ಮನೆಗೆ ಹೋಗುವಂತೆ ಹೇಳಿದ್ದಾರೆ.