ಪಣಜಿ, ಜು 10 (DaijiworldNews/DB): ಗೋವಾದ ಕಾಂಗ್ರೆಸ್ನ ಏಳು ಮಂದಿ ಶಾಸಕರು ಪಕ್ಷದ ಸಭೆಗೆ ಗೈರು ಹಾಜರಾಗಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಇದು ಬಿಜೆಪಿ ಹಬ್ಬಿಸಿರುವ ವದಂತಿ ಎಂದು ಕಾಂಗ್ರೆಸ್ ಆಪಾದಿಸಿದೆ.
ವಿಧಾನಸಭೆ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಗೋವಾ ಕಾಂಗ್ರೆಸ್ ಪಕ್ಷದ ಆಂತರಿಕ ಸಭೆ ಕರೆದಿತ್ತು. ಈ ಸಭೆಗೆ ಏಳು ಮಂದಿ ಶಾಸಕರು ಗೈರಾಗಿದ್ದರು. ಗೋವಾ ಕಾಂಗ್ರೆಸ್ನಲ್ಲಿ ಭಿನ್ನಮತ ಸೃಷ್ಟಿಯಾಗಿದ್ದು, ಕೆಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಸಭೆಗೆ ಶಾಸಕರು ಗೈರಾಗಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಆದರೆ ಈ ವಿಷಯವನ್ನು ಗೋವಾ ಕಾಂಗ್ರೆಸ್ ತಳ್ಳಿ ಹಾಕಿದ್ದು, ಆಡಳಿತಾರೂಢ ಬಿಜೆಪಿ ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ತಿಳಿಸಿದೆ. ಗೋವಾ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಪಾಟ್ಕರ್ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿ, ಗೋವಾ ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಬಿಜೆಪಿಯು ಅನಗತ್ಯವಾಗಿ ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿದೆ ಎಂದಿದ್ದಾರೆ.
ವರ್ಷಾರಂಭದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ದಿಗಂಬರ್ ಕಾಮತ್ ಕೂಡಾ ಶನಿವಾರ ನಡೆದ ಶಾಸಕರ ಸಭೆಗೆ ಹಾಜರಾಗಿರಲಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.