ಡಿಸ್ಪುರ, ಜು 10 (DaijiworldNews/DB): ಇಂಧನ, ದಿನನಿತ್ಯದ ಆಹಾರ ಮತ್ತು ಇತರ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪುರುಷ ಮತ್ತು ಮಹಿಳೆಯೊಬ್ಬರು ಶಿವ ಪಾರ್ವತಿ ವೇಷ ಧರಿಸಿ ಪ್ರತಿಭಟನೆ ಮಾಡಿರುವ ಘಟನೆ ಅಸ್ಸಾಂನ ನಾಗಾಂವ್ ನಲ್ಲಿ ಶನಿವಾರ ನಡೆದಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರದ ‘ ಸಿಗರೇಟ್ ಸೇದುವ ಕಾಳಿ’ ಪೋಸ್ಟರ್ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ನಾಗಾಂವ್ನಲ್ಲಿ ಪುರುಷ ಮತ್ತು ಮಹಿಳೆಯ ಪ್ರತಿಭಟನೆಗೆ ಶಿವ ಪಾರ್ವತಿಯರ ವೇಷ ಧರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಸನಾತನ ಧರ್ಮದ ಭಾವನೆಗಳಿಗೆ ಇದರಿಂದ ಧಕ್ಕೆಯಾಗಿದೆ ಎಂದು ಆರೋಪಿಸಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ನ ನಾಗಾವ್ ಜಿಲ್ಲಾ ಘಟಕ ಖಂಡನೆ ವ್ಯಕ್ತಪಡಿಸಿವೆ.
ಇಬ್ಬರೂ ಬೈಕ್ನಲ್ಲಿ ನಾಗಾವ್ನ ಕಾಲೇಜು ಚೌಕ್ಗೆ ಆಗಮಿಸಿದ್ದಾರೆ. ಬಳಿಕ ವಾಹನದಲ್ಲಿ ಇಂಧನ ಖಾಲಿಯಾಗುತ್ತಿದೆ ಎಂಬ ವಿಷಯದಲ್ಲಿ ಬೀದಿ ನಾಟಕ ಪ್ರದರ್ಶನ ಮಾಡಿದ್ದಾರೆ. ಶಿವ ವೇಷಧಾರಿಯು ಪ್ರಧಾನಿ ನರೇಂದ್ರ ಮೋದಿಯವರು ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಜನಸಾಮಾನ್ಯರ ಮೇಲೆ ಕಾಳಜಿ ಇಲ್ಲದಂತಾಗಿದೆ ಎಂದು ಆಪಾದಿಸಿದರು. ಅಲ್ಲಿಂದ ಬಡಾ ಬಜಾರ್ ಪ್ರದೇಶಕ್ಕೆ ಆಗಮಿಸಿ ಅಲ್ಲಿಯೂ ಬೀದಿ ನಾಟಕ ಪ್ರದರ್ಶಿಸಿದರು.
ಇಬ್ಬರ ವಿರುದ್ಧ ನಾಗೋನ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಶಿವ ವೇಷಧಾರಿ ಬಿರಿಂಚಿ ಬೋರಾನನ್ನು ಬಂಧಿಸಲಾಗಿದೆ.