ಮುಂಬೈ, ಜು 10 (DaijiworldNews/DB): ಬಿಜೆಪಿ ಮುಖಂಡರೊಬ್ಬರ ಮನೆ ಮುಂಭಾಗದಲ್ಲಿ ಚಿನ್ನಾಭರಣ, ನಗದು ಹಾಗೂ ಗಣಪನ ಮೂರ್ತಿ ಇದ್ದ ಬ್ಯಾಗ್ ಪತ್ತೆಯಾದ ಘಟನೆ ಮುಂಬೈಯಲ್ಲಿ ಭಾನುವಾರ ನಡೆದಿದೆ. ಯಾರೋ ಕಳವುಗೈದು ಬ್ಯಾಗ್ ತಂದು ಇಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯರೂ ಆಗಿರುವ ಪ್ರಸಾದ್ ಲಾಡ್ ಅವರ ಮನೆಯ ಬಾಗಿಲ ಮುಂಭಾಗ ಭಾನುವಾರ ಬೆಳಗ್ಗೆ ಚೀಲವೊಂದು ಬಿದ್ದಿತ್ತು. ಆತಂಕಿತರಾದ ಅವರು ಪೊಲೀಸರನ್ನು ಕರೆಸಿ ಬ್ಯಾಗ್ ತೆರೆದು ನೋಡಿದ್ದಾರೆ. ಈ ವೇಳೆ ಬ್ಯಾಗ್ನೊಳಗೆ ನಗದು, ಚಿನ್ನಾಭರಣ, ಗಣಪತಿ ಮೂರ್ತಿ ಪತ್ತೆಯಾಗಿದೆ. ಮೂರ್ನಾಲ್ಕು ಪ್ಲಾಸ್ಟಿಕ್ ಚೀಲಗಳಲ್ಲಿ ಇವುಗಳನ್ನು ಇರಿಸಲಾಗಿತ್ತು. ಇದರಿಂದ ಸ್ವತಃ ಪ್ರಸಾದ್ ಲಾಡ್ ಅವರಿಗೇ ಆಶ್ಚರ್ಯ ಉಂಟಾಗಿದೆ.
ಯಾರೋ ಕಳ್ಳತನ ಮಾಡಿ ಬ್ಯಾಗ್ನ್ನು ಮನೆ ಮುಂಭಾಗ ತಂದು ಇಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಭಾನುವಾರ ಬೆಳಗ್ಗೆ ಮನೆಯ ಬಾಗಿಲ ಮುಂದೆಯೇ ಚೀಲವೊಂದು ಪತ್ತೆಯಾಗಿದ್ದು, ಅದನ್ನು ತೆಗೆದು ನೋಡಿದ ಬಿಜೆಪಿ ಮುಖಂಡನಿಗೇ ಅಚ್ಚರಿ ಕಾದಿತ್ತು. ಮುಂಜಾನೆ 5.30 ರಿಂದ 6.30ರ ನಡುವೆ ಯಾರೋ ಮನೆ ಬಳಿ ಓಡಾಡಿರುವುದು ಗೊತ್ತಾಗಿದ್ದು, ಅವರದ್ದೇ ಕೆಲಸ ಆಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.