ಆಂಧ್ರಪ್ರದೇಶ, ಜು 10 (DaijiworldNews/DB): ಆಂಧ್ರಪ್ರದೇಶದಲ್ಲಿ ತೆರೆದ ಬೋರ್ವೆಲ್ನಲ್ಲಿ 30 ಅಡಿ ಆಳಕ್ಕೆ ಬಿದ್ದ ಒಂಬತ್ತು ವರ್ಷದ ಬಾಲಕನೊಬ್ಬನನ್ನು ಐದು ಗಂಟೆಗಳ ಸತತ ಕಾರ್ಯಾಚರಣೆಯಲ್ಲಿ ರಕ್ಷಿಸುವ ಮೂಲಕ ಯುವಕನೊಬ್ಬ ಸಾಹಸ ಮೆರೆದಿದ್ದಾನೆ.
ಜಸ್ವಂತ್ ಎಂಬ ಬಾಲಕ ಮನೆ ಸಮೀಪ ಆಟದಲ್ಲಿ ನಿರತನಾಗಿದ್ದ. ರಾತ್ರಿ ವೇಳೆ ಆತ ನಾಪತ್ತೆಯಾಗಿದ್ದ. ಪೋಷಕರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ಬೋರ್ವೆಲ್ನೊಳಗಿನಿಂದ ಬಾಲಕನ ಕಿರುಚಾಟ ಕೇಳಿದ ನೆರೆಹೊರೆಯವರು ಓಡಿ ಬಂದು ನೋಡಿದಾಗ ಸುಮಾರು 400 ಅಡಿ ಆಳದ ಬೋರ್ವೆಲ್ನೊಳಗೆ 30 ಅಡಿ ಕೆಳಗೆ ಬಾಲಕ ಬಿದ್ದಿದ್ದ. ಕೂಡಲೇ ಹಗ್ಗ ಕಟ್ಟಿ ಬೋರ್ವೆಲ್ ಒಳಗೆ ಬಿಟ್ಟು ಬಾಲಕ ಇರುವ ಆಳ ಪತ್ತೆಯಾಗಿತ್ತು. ಸ್ಥಳೀಯ ನಿವಾಸಿ ಸುರೇಶ್ ತನ್ನ ಸೊಂಟಕ್ಕೆ ಹಗ್ಗ ಕಟ್ಟಿ 0.25 ಮೀಟರ್ಗೂ ಕಡಿಮೆ ವ್ಯಾಸದ ಕಿರಿದಾದ ರಂಧ್ರದಲ್ಲಿ ಬೋರ್ವೆಲ್ನೊಳಗೆ ಇಳಿದನು. ಬಾಲಕ ಇರುವಲ್ಲಿ ತಲುಪಿದ ಕೂಡಲೇ ಅವನ ಸೊಂಟಕ್ಕೆ ಹಗ್ಗ ಬಿಗಿದ. ಕೂಡಲೇ ಮೇಲಿದ್ದವರು ಅವರಿಬ್ಬರನ್ನು ಸುರಕ್ಷಿತವಾಗಿ ಮೇಲೆಳೆದರು. ಸುಮಾರು ಐದು ತಾಸು ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಅಗ್ನಿಶಾಮಕ ಸಿಬಂದಿ ಹಾಗೂ ಪೊಲೀಸರು ತಲುಪುವಷ್ಟರಲ್ಲಿ ಬಾಲಕನನ್ನು ಸುರೇಶ್ ರಕ್ಷಿಸಿದ್ದು, ಸುರೇಶ್ನ ಸಾಹಸ ಪ್ರಶಂಸೆಗೆ ಪಾತ್ರವಾಗಿದೆ. ಆಂಧ್ರದ ಏಲೂರಿನ ದ್ವಾರಕಾ ತಿರುಮಲದ ಗುಂಡುಗೋಳಗುಂಟಾ ಗ್ರಾಮದಲ್ಲಿ ಘಟನೆ ನಡೆದಿದೆ.