ಬೆಂಗಳೂರು, ಜು 10 (DaijiworldNews/DB): ವಿದ್ಯುತ್ ಬಿಲ್ ಪಾವತಿಸಲು ಹೋಗಿ ಮಹಿಳೆಯೊಬ್ಬರು ಸೈಬರ್ ಕಳ್ಳರಿಂದ 10.76 ಲಕ್ಷ ರೂ. ವಂಚನೆಗೊಳಗಾದ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಕುಮಾರಸ್ವಾಮಿ ಲೇಔಟ್ನ ನಿವಾಸಿ ಡಾ. ವಾಣಿ ಪ್ರಭಾಕರ್ ಹಣ ಕಳೆದುಕೊಂಡವರು. ವಿದ್ಯುತ್ ಬಿಲ್ ಪಾವತಿಸುವಂತೆ ಅಪರಿಚಿತ ಸಂಖ್ಯೆಯಿಂದ ವಾಣಿ ಅವರಿಗೆ ಜು.7ರಂದು ಸಂದೇಶ ಬಂದಿತ್ತು. ಆ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಟೀಮ್ ವಿವರ್ ಆಪ್ ಡೌನ್ಲೋಡ್ ಮಾಡಿವಂತೆ ನಿರ್ದೇಶಿಸಿದ್ದರು. ಅದರಂತೆ ವಾಣಿ ಆಪ್ ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ 100 ರೂ. ವಿದ್ಯುತ್ ಬಿಲ್ ಪಾವತಿ ಮಾಡಿದ್ದರು. ಆದರೆ ಸ್ವಲ್ಪ ಹೊತ್ತಿನಲ್ಲಿ ವಾಣಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 10.76 ಲಕ್ಷ ರೂ. ಹಣ ಇನ್ನೊಂದು ಖಾತೆಗೆ ವರ್ಗಾವಣೆಯಾಗಿರುವುದಾಗಿ ಸಂದೇಶ ಬಂದಿದೆ.
ಕೂಡಲೇ ವಾಣಿಯವರು ಬ್ಯಾಂಕ್ಗೆ ತೆರಳಿ ಪರಶೀಲಿಸಿದ್ದಾರೆ. ಈ ವೇಳೆ ಸೈಬರ್ ಕಳ್ಳರ ಕರಾಮತ್ತು ಗೊತ್ತಾಗಿದೆ. ಬಳಿಕ ಮಹಿಳೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದರು.