ಬೆಂಗಳೂರು, ಜು 10 (DaijiworldNews/DB): ತಡರಾತ್ರಿ ಅಪಾರ್ಟ್ಮೆಂಟ್ಗೆ ಆಗಮಿಸಿದ ಅಪರಿಚಿತ ವ್ಯಕ್ತಿಯನ್ನು ಕಳ್ಳನೆಂದು ಭಾವಿಸಿ ಸೆಕ್ಯುರಿಟಿ ಗಾರ್ಡ್ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಎಚ್ಎಎಲ್ನಲ್ಲಿ ನಡೆದಿದೆ.
ಛತ್ತೀಸ್ಘಡ ಮೂಲದ ವ್ಯಕ್ತಿ ಸಾವನ್ನಪ್ಪಿದವನು. ಈತ ತರಬೇತಿಗಾಗಿ ಬೆಂಗಳೂರಿಗೆ ಆಗಮಿಸಿದ್ದ ಎನ್ನಲಾಗಿದೆ. ಶ್ಯಾಮನಾಥ್ ಕೊಲೆಗೈದ ಸೆಕ್ಯುರಿಟಿ ಗಾರ್ಡ್.
ಮಾರತ್ಹಳ್ಳಿ ಬಳಿಯ ವಂಶಿ ಸಿಟಾಡೆಲ್ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿ ಅಪಾರ್ಟ್ಮೆಂಟ್ಗೆ ಆಗಮಿಸಿ ಒಳ ನುಗ್ಗಲು ಯತ್ನಿಸಿದ್ದಾನೆ. ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಗಾರ್ಡ್ ಎಷ್ಟೇ ಕೇಳಿದರೂ ವ್ಯಕ್ತಿ ಏನನ್ನೂ ಮಾತನಾಡದೆ ಸುಮ್ಮನಿದ್ದ. ಇದರಿಂದ ಆತ ಕಳ್ಳನೇ ಇರಬೇಕು ಎಂದು ಭಾವಿಸಿ ಪಕ್ಕದಲ್ಲಿದ್ದ ರಾಡ್ನಿಂದ ವ್ಯಕ್ತಿಯ ತಲೆಗೆ ಬಲವಾಗಿ ಹೊಡೆದಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.