ಬೆಂಗಳೂರು, ಜು 10 (DaijiworldNews/DB): ಮಹಿಳೆ ಮೇಲೆ ಮೂರು ವರ್ಷ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತಿರುವ ಪೊಲೀಸ್ ಕಾನ್ಸ್ಟೇಬಲ್ಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಆರೋಪಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಸಂತ್ರಸ್ತೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದೆ. ಅಲ್ಲದೆ, ಆರೋಪಿ ಮಹದೇವಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಫಕೀರಪ್ಪ ಹಟ್ಟಿಯನ್ನು ಬಂಧಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಆರೋಪಿ ಮತ್ತು ದೂರುದಾರರ ನಡುವೆ ಒಪ್ಪಿತ ಸಂಬಂಧವಿದೆ ಎಂದು ಜಾಮೀನು ಅರ್ಜಿ ಪರಿಗಣಿಸುವ ಹಂತದಲ್ಲಿಯೇ ವಿಚಾರಣಾ ಕೋರ್ಟ್ ಭಾವಿಸಿದೆ. ಅಲ್ಲದೆ, ಸಂತ್ರಸ್ತೆಯ ದೂರನ್ನು ಪರಿಗಣಿಸದೆ, ಆರೋಪಿಯ ದೂರನ್ನು ಮಾತ್ರ ಪರಿಗಣಿಸಿದೆ. ಅತ್ಯಾಚಾರವು ಗಂಭೀರ ಪ್ರಕರಣ. ಆರೋಪಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಲ್ಲಿರುವವನಾಗಿರುವುದರಿಂದ ಆತನ ವಿರುದ್ದದ ಆರೋಪಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ ದಾಖಲಿಸಿ ದೂರುದಾರರ ದೂರು ಆಲಿಸುವುದು ಪೊಲೀಸರ ಕರ್ತವ್ಯ. ಇತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದರೂ ಮೊದಲು ದೂರುದಾರರ ದೂರು ದಾಖಲಿಸಿ ಆ ಬಳಿಕ ಅವರ ವ್ಯಾಪ್ತಿಯ ಠಾಣೆಗೆ ಅದನ್ನು ವರ್ಗಾಯಿಸಬೇಕು. ಆದರೆ ಪೊಲೀಸರು ದೂರುದಾರೆ ನೀಡಿದ ದೂರುಗಳನ್ನು ಅವಗಣಿಸಿದ್ದಾರೆ. ಸೆಷನ್ಸ್ ಕೋರ್ಟ್ ಕೂಡಾ ಒಪ್ಪಿತ ಸಂಬಂಧವೆಂಬ ನಿರ್ಧಾರಕ್ಕೆ ಬಂದು ದೂರುದಾರರ ಅರ್ಜಿ ಪರಿಗಣಿಸದೇ ಇರುವುದು ದುರದೃಷ್ಟಕರ ಎಂದು ಹೈಕೋರ್ಟ್ ವಿಷಾದ ವ್ಯಕ್ತಪಡಿಸಿತು.
ಏನಿದು ಘಟನೆ?
ಮಹದೇವ ಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಫಕೀರಪ್ಪ ಹಟ್ಟಿ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ 2019ರಿಂದ ನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ ಮೂರು ವರ್ಷಗಳಿಂದ ಆಕೆಯೊಂದಿಗೆ ಸಂಬಂಧದಲ್ಲಿದ್ದ ಆತ, ಬಳಿಕ ಮದುವೆಗೆ ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಮಹಿಳೆ ದೂರು ನೀಡಿದ್ದರು. ಆದರೆ ಅಲ್ಲಿ ದೂರು ಸ್ವೀಕರಿಸದ ಕಾರಣ ಪೊಲೀಸ್ ಆಯುಕ್ತರು, ಉಪ ಆಯುಕ್ತರಿಗೂ ದೂರು ನೀಡಿದ್ದರು. ಅದೂ ಪ್ರಯೋಜನಕ್ಕೆ ಬಾರದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ದೂರು ಸಲ್ಲಿಸಿದ್ದರು. ಅಲ್ಲಿ ತನಿಖೆಗೆ ಆದೇಶ ನೀಡಿದ ವೇಳೆ ಫಕೀರಪ್ಪ ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ಸಿಕ್ಕಿತ್ತು. ಆರೋಪಿಯ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಂತ್ರಸ್ತ ಮಹಿಳೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.