ಚೆನ್ನೈ, ಜು 09 (DaijiworldNews/DB): ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಪುತ್ರ, ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಅವರ ಚೆನ್ನೈನಲ್ಲಿರುವ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಚೆನ್ನೈನ ನುಂಗಂಬಾಕ್ಕಂನಲ್ಲಿರುವ ಮನೆಗೆ ದಾಳಿ ನಡೆಸಲಾಗಿದೆ. ಒಟ್ಟು ಆರು ಮಂದಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. 6 ಮಂದಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಮಾಡಿದ್ದಾರೆ. ದಾಳಿ ವೇಳೆ ಮನೆಯಲ್ಲಿ ಪಿ. ಚಿದಂಬರಂ ಹಾಗೂ ಪುತ್ರ ಕಾರ್ತಿ ಚಿದಂಬರಂ ಇರಲಿಲ್ಲ. ಅವರ ಅನುಪಸ್ಥಿತಿಯಲ್ಲಿಯೇ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಚೀನಾ ಪ್ರಜೆಗಳಿಗೆ ಅಕ್ರಮವಾಗಿ ವೀಸಾ ಒದಗಿಸಿದ ಆರೋಪ ಕಾರ್ತಿ ಚಿದಂಬರಂ ಮೇಲಿತ್ತು. ಇದಕ್ಕಾಗಿ ಕಳೆದ ಮೇ 18ರಂದು ಸಿಬಿಐ ಅಧಿಕಾರಿಗಳು ಕಾರ್ತಿ ಚಿದಂಬರಂ ಹಾಗೂ ಪಿ. ಚಿದಂಬರಂ ಅವರಿಗೆ ಸೇರಿದ ವಿವಿಧ ಕಡೆಗಳ ಮನೆಗಳ ಮೇಲೆ ದಾಳಿ ನಡೆಸಿದ್ದರು. ಚೆನ್ನೈ, ದೆಹಲಿ ನಿವಾಸ, ಕಚೇರಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 10ಕ್ಕೂ ಹೆಚ್ಚು ಕಡೆ ದಾಳಿ ನಡೆದಿತ್ತು. ಇದೀಗ ಮತ್ತೆ ಚೆನ್ನೈ ನಿವಾಸದ ಮೇಲೆ ದಾಳಿ ನಡೆದಿದೆ.