ನಾಗಪುರ, ಜು 09 (DaijiworldNews/DB): ದುಷ್ಕರ್ಮಿಗಳಿಂದ ಇತ್ತೀಚೆಗೆ ಹತ್ಯೆಗೀಡಾಗಿದ್ದ ಉಮೇಶ್ ಕೊಲ್ಹೆ ಅವರ ಮನೆ ಮುಂಭಾಗ ಸಂಸದೆ ನವನೀತ್ ರಾಣಾ ಹಾಗೂ ಅವರ ಪತಿ ಶಾಸಕ ರವಿ ರಾಣಾ ಅವರು ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಸಂಸದೆ ನವನೀತ್, ಕೊಲ್ಹೆ ಹಂತಕರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು. ಹೀಗೆ ಮಾಡಿದ್ದಲ್ಲಿ ಅಪರಾಧ ಪ್ರಕರಣಗಳು ದೇಶದಲ್ಲಿ ಮರುಕಳಿಸುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.
ಪ್ರವಾದಿ ಮಹಮ್ಮದರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಅಮರಾವತಿ ಔಷಧ ವ್ಯಾಪಾರಿ ಉಮೇಶ್ ಕೊಲ್ಹೆ ಅವರು ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಬಳಿಕ ಅವರ ಹತ್ಯೆ ನಡೆದಿತ್ತು. ಈ ಪೋಸ್ಟ್ಗೂ, ಹತ್ಯೆಗೂ ಸಂಬಂಧವಿರುವ ಸಾಧ್ಯತೆ ಇದೆ ಎಂಬುದಾಗಿ ಪೊಲೀಸರು ಹೇಳಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುದಸ್ಸರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24) ಶೋಯೆಬ್ ಖಾನ್ (22), ಅತೀಬ್ ರಶೀದ್ (22) ಮತ್ತು ಯೂಸುಫ್ ಖಾನ್ (32) ಮತ್ತು ಪ್ರಕರಣದ ಮಾಸ್ಟರ್ ಮೈಂಡ್ ಶೇಖ್ ಇರ್ಫಾನ್ ಶೇಖ್ ರಹೀಮ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.