ಮುಂಬೈ, ಜು 09 (DaijiworldNews/DB): ಪತ್ನಿಗೆ ಸುಳ್ಳು ಹೇಳಿ ಸ್ನೇಹಿತೆಯೊಂದಿಗೆ ಮೋಜು ಮಸ್ತಿಗಾಗಿ ಮಾಲ್ಡೀವ್ಸ್ಗೆ ತೆರಳಿದ್ದ ವ್ಯಕ್ತಿಯೋರ್ವ ಪತ್ನಿಗೆ ಗೊತ್ತಾಗದಿರಲು ಪಾಸ್ಪೋರ್ಟ್ನಲ್ಲಿ ಮಾಡಿದ ಅಚಾತುರ್ಯದಿಂದಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
32 ವರ್ಷದ ಮುಂಬೈ ಮೂಲದ ಎಂಜಿನಿಯರ್ ವ್ಯಕ್ತಿಯು ಕೆಲಸದ ನಿಮಿತ್ತ ವಿದೇಶಕ್ಕೆ ತೆರಳುವುದಾಗಿ ಪತ್ನಿ ಬಳಿ ಸುಳ್ಳು ಹೇಳಿ ಸ್ನೇಹಿತೆಯನ್ನು ಕರೆದುಕೊಂಡು ಮಾಲ್ಡೀವ್ಸ್ಗೆ ತೆರಳಿದ್ದ. ಅಲ್ಲಿ ಆಕೆಯೊಂದಿಗೆ ಮೋಜು ಮಸ್ತಿಯಲ್ಲಿರುವಾಗ ಪತ್ನಿ ಪದೇಪದೇ ಕರೆ ಮಾಡಿದ್ದಾಳೆ. ವಾಟ್ಸಾಪ್ನಲ್ಲಿಯೂ ಕರೆ ಮಾಡಿದಾಗ ಪತಿ ಕರೆ ಸ್ವೀಕರಿಸಲಿಲ್ಲ. ಪತ್ನಿಯ ನಿರಂತರ ಕರೆಯಿಂದಾಗಿ ಬೇಸತ್ತ ಆತ ಮಾಲ್ಡೀವ್ಸ್ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಲು ನಿರ್ಧರಿಸಿದ. ಆದರೆ ತಾನು ಮಾಲ್ಡೀವ್ಸ್ಗೆ ಬಂದ ವಿಚಾರ ಪತ್ನಿಗೆ ತಿಳಿದರೆ ಅಚಾತುರ್ಯವಾಗಬಹುದೆಂಬ ಕಾರಣಕ್ಕಾಗಿ ತನ್ನ ಪಾಸ್ಪೋರ್ಟ್ನಲ್ಲಿನ ವೀಸಾ ಮುದ್ರಿಯ ಪುಟಗಳನ್ನು ಹರಿದು ಹಾಕಿದ್ದಾನೆ.
ಗುರುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆತನನ್ನು ಎಮಿಗ್ರೇಶನ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತನ ಪಾಸ್ಪೋರ್ಟ್ನ 3-6 ಮತ್ತು 31-34 ಹಾಳೆಗಳು ಇಲ್ಲದಿರುವುದು ಗೊತ್ತಾಗಿದೆ. ತತ್ಕ್ಷಣ ಅಧಿಕಾರಿಗಳು ವಿಚಾರಿಸಿದಾಗ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಕೂಡಲೇ ಆತನನ್ನು ಬಂಧಿಸಿ ವಂಚನೆ ಮತ್ತು ಫೋರ್ಜರಿ ಪ್ರಕರಣ ದಾಖಲಿಸಿದ್ದಾರೆಂದು ವರದಿಯಾಗಿದೆ.