ಬೆಂಗಳೂರು, ಜು 09 (DaijiworldNews/DB): ಪಿಎಸ್ಐ ನೇಮಕಾತಿ ಹಗರಣದಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲವೆಂದಾದಲ್ಲಿ ನ್ಯಾಯಾಂಗ ತನಿಖೆಗೆ ಪ್ರಕರಣವನ್ನು ವಹಿಸುವುದಕ್ಕೆ ಭಯ ಯಾಕೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಪ್ರಕರಣದ ತನಿಖೆ ನಡೆಸಲು ಸರ್ಕಾರ ಅಸಮರ್ಥವಾಗಿದೆ ಎಂದು ಅವರು ಒಪ್ಪಿಕೊಳ್ಳಲಿ. ಅವರಿಗೆ ಸಾಧ್ಯವಾಗದಿದ್ದರೆ ತನಿಖೆಯ ಅಧಿಕಾರವನ್ನು ನಮಗೆ ವಹಿಸಲಿ ಎಂದರು.
ಸರ್ಕಾರ ಯಾರ ಬಳಿ ಇದೆ? ಮಾತೆತ್ತಿದರೆ ಪ್ರಕರಣದಲ್ಲಿ ಕಾಂಗ್ರೆಸ್ ಪಾತ್ರ ಇದೆ ಎಂಬುದಾಗಿ ಗೃಹ ಸಚಿವರು ಹೇಳುತ್ತಾರೆ. ಬಿಜೆಪಿಗರು ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದ ಮೇಲೆ ನ್ಯಾಯಾಂಗ ತನಿಖೆಗೆ ಒಪ್ಪಿಸಲು ಅವರಿಗೆ ಭಯವೇಕೆ? ಕಳೆದ ಐದು ವರ್ಷಗಳ ಕಾಂಗ್ರೆಸ್ ಸರ್ಕಾರದ ಅಕ್ರಮಗಳನ್ನು ಬಹಿರಂಗಗೊಳಿಸುವುದಾಗಿ ಹೇಳಿರುವ ಮುಖ್ಯಮಂತ್ರಿಗಳು ಐದು ವರ್ಷವಲ್ಲ, ಐವತ್ತು ವರ್ಷಗಳ ಪ್ರಕರಣಗಳನ್ನೇ ಹೊರಗೆಳೆಯಲಿ ಎಂದು ಸವಾಲು ಹಾಕಿದರು.
ಪತ್ರಿಕೆಗಳಲ್ಲಿ ನಿಮ್ಮ ಅಥವಾ ನಿಮ್ಮ ಪಕ್ಷದ ಬೇರೆಯವರ ಹೆಸರು ಬರುತ್ತದೆ ಎಂದು ಭಯವೇ? ನಿಜವಾಗಿಯೂ ತಪ್ಪಿತಸ್ಥರಲ್ಲದಿದ್ದರೆ ನ್ಯಾಯಾಂಗ ತನಿಖೆಗೆ ಪ್ರಕರಣವನ್ನು ವಹಿಸಿ. ಅದರ ಹೊರತಾಗಿ ಬೇರೆ ಮಾತು ಅನಗತ್ಯ ಎಂದರು.