ನವದೆಹಲಿ, ಜು 09 (DaijiworldNews/DB): ಅಮರನಾಥ ದೇವಸ್ಥಾನದ ಬಳಿ ಸಂಭವಿಸಿದ ದುರ್ಘಟನೆಗೆ ಅತಿಯಾದ ಮಳೆ ಕಾರಣವೇ ಹೊರತು ಮೇಘಸ್ಪೋಟವಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಒಂದು ಗಂಟೆಯಲ್ಲಿ 100 ಮಿಮೀ ಮಳೆ ಬಂದರೆ ಅದನ್ನು ಹವಾಮಾನ ಇಲಾಖೆಯ ಪ್ರಕಾರ ಮೇಘಸ್ಪೋಟ ಎನ್ನಬಹುದು. ಆದರೆ, ಶುಕ್ರವಾರ ಸಂಜೆ 4.30 ರಿಂದ 6.30ರ ನಡುವೆ 31 ಮಿಮೀ ಮಳೆ ಇಲ್ಲಿ ಆಗಿದ್ದು, ಇದನ್ನು ಮೇಘಸ್ಪೋಟವೆಂದು ಹೇಳಲು ಬರುವುದಿಲ್ಲ. ದೇವಳದ ಸಮೀಪ ಎತ್ತರದ ಪರ್ವತಗಳಿರುವುದರಿಂದ ಮಳೆ ಸುರಿಯುವಾಗ ಹಠಾತ್ ಪ್ರವಾಹ ಉಂಟಾಗುತ್ತದೆ. ಇದೇ ಅಲ್ಲಿ ಸಂಭವಿಸಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ದೇವಳದ ಬಳಿ ಸ್ವಯಂಚಾಲಿತ ಹವಾಮಾನ ಕೇಂದ್ರ ಇದ್ದು, ತೀರ್ಥಯಾತ್ರೆಯ ವೇಳೆ ಭಕ್ತಾದಿಗಳಿಗೆ ಇದರಿಂದ ಹವಾಮಾನ ಮುನ್ಸೂಚನೆ ಗೊತ್ತಾಗುತ್ತದೆ. ಆದರೆ ಸುತ್ತಲಿನ ಪರ್ವತಗಳು ದುರ್ಗಮವಾಗಿರುವ ಕಾರಣದಿಂದಾಗಿ ಇಂತಹ ನಿಗಾ ಕೇಂದ್ರಗಳು ಅಲ್ಲಿಲ್ಲ. ಹೀಗಾಗಿ ವೈಪರೀತ್ಯ ಅರಿಯಲು ಸಾಧ್ಯವಾಗಿಲ್ಲ ಎಂದವರು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಸುರಿದ ಮಳೆಗೂ ನಿನ್ನೆಯ ರೀತಿಯಲ್ಲೇ ಘಟನೆಗಳಾಗಿದ್ದವು ಎಂದು ಶ್ರೀನಗರದ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕಿ ಸೋನಮ್ ಲೋಟಸ್ ಹೇಳಿದ್ದಾರೆ.