ಹಾಸನ, ಜು 09 (DaijiworldNews/DB): ತಮ್ಮ ಅಸ್ತಿತ್ವದ ಪ್ರದರ್ಶನಕ್ಕಾಗಿ ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವ ಮಾಡಲು ಹೊರಟಿದ್ದಾರೆ. ಆದರೆ ಇದು ಡಿ.ಕೆ. ಶಿವಕುಮಾರ್ಗೆ ದುಃಖ ತರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು ವ್ಯಂಗ್ಯವಾಡಿದ್ದಾರೆ.
ಹಾಸನದಲ್ಲಿ ಎರಡು ದಿನ ಕಾಲ ನಡೆಯುವ ರಾಜ್ಯ ಪದಾಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಸಿದ್ದರಾಮೋತ್ಸವ ತಡೆಯಲು ಸಾಧ್ಯವಾಗದೆ ಕಾಂಗ್ರೆಸ್ ಪಕ್ಷದ ವರಿಷ್ಠರು ತೇಪೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಗುಂಪುಗಾರಿಕೆಯಿಂದಾಗಿ ಕಾಂಗ್ರೆಸ್ನ ಆಂತರಿಕ ಬೇಗುದಿ ಹೊರ ಬಂದಿದೆ ಎಂದರು.
ಕಾಂಗ್ರೆಸ್ ಬಹುಮತ ಗಳಿಸಲಿದೆ ಎಂಬ ಆಂತರಿಕೆ ಸಮೀಕ್ಷೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆಂತರಿಕ ಸಮೀಕ್ಷೆ ಎಂಬುದು ಜನರನ್ನು ಬೇರೆಡೆಗೆ ಸೆಳೆಯಲು ಮಾಡಿದ ತಂತ್ರ. ಸಿದ್ದರಾಮಯ್ಯನವರ ಗುಂಪಿಗೆ ಎಷ್ಟು, ಡಿಕೆಶಿ ಗುಂಪಿಗೆ ಎಷ್ಟು ಸೀಟು ಬರಬಹುದು ಎಂಬ ಚರ್ಚೆಯಲ್ಲಿ ಆ ಪಕ್ಷದವರು ಮುಳುಗಿದ್ದಾರೆ. ಅವರ ಪರಿಸ್ಥಿತಿ ಅಲ್ಲಿಯವರೆಗೆ ಬಂದಿದೆ. ಸಿಎಂ ಹುದ್ದೆಯ ಕಚ್ಚಾಟವೇ ಇದಕ್ಕೆ ಕಾರಣವಾಗಿದೆ. ಇದರಿಂದ ಕಾಂಗ್ರೆಸ್ ಎರಡು ಹೋಳಾಗುವುದು ನಿಶ್ಚಿತ. ಬಿಜೆಪಿ150 ಸ್ಥಾನ ಪಡೆದು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಖಂಡಿತ ಎಂದು ತಿಳಿಸಿದರು.
ತನ್ನ ಪಕ್ಷದವರ ಮೇಲೆ ಭ್ರಷ್ಟಾಚಾರ ಆರೋಪ ಬಂದ ತತ್ಕ್ಷಣ ಅದನ್ನು ಇನ್ನೊಂದು ಪಕ್ಷದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುವುದು ಕಾಂಗ್ರೆಸ್ನ ಜಾಯಮಾನವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಮೇಲೆ ದಾಳಿಯಾದಾಗಲೂ ಅದನ್ನು ಬಿಜೆಪಿ ಮೇಲೆ ಹಾಕಿದ್ದಾರೆ. ಇಡಿ, ಎಸಿಬಿಯವರು ಬಿಜೆಪಿಯವರ ಮನೆ ಮೇಲೆಯೂ ದಾಳಿ ಮಾಡಿದ್ದಾರೆ. ಆದರೆ ಯಾರೂ ಆತಂಕಕ್ಕೊಳಗಾಗಿಲ್ಲ, ಗೋದ್ರಾ ಗಲಭೆ ವೇಳೆ ಮೋದಿಯವರನ್ನೂ ವಿಚಾರಣೆಗೊಳಪಡಿಸಿದ್ದಾರೆ. ಅಮಿತ್ ಶಾ ಅವರನ್ನು ಜೈಲಿಗಟ್ಟಿದ್ದಾರೆ. ಆದರೆ ನಾವ್ಯಾರೂ ಆರೋಪವನ್ನು ಇನ್ನೊಂದು ಪಕ್ಷದ ಮೇಲೆ ಹಾಕಿಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.