ಬೆಂಗಳೂರು, ಜು 09 (DaijiworldNews/DB): ರಾಜ್ಯದಿಂದ ನೂರಕ್ಕೂ ಹೆಚ್ಚು ಮಂದಿ ಕನ್ನಡಿಗರು ಯಾತ್ರೆ ಕೈಗೊಂಡಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಕನ್ನಡಿಗರ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಅಮರನಾಥದಲ್ಲಿ ಸಂಭವಿಸಿದ ಮೇಘಸ್ಪೋಟದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಿಂದ ಯಾತ್ರೆ ಕೈಗೊಂಡವರಿಗೆ ಯಾವುದೇ ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದರು.
ಮೇಘಸ್ಪೋಟದಿಂದ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರ ರಕ್ಷಣಾ ಕಾರ್ಯಕ್ಕಾಗಿ ಸಹಾಯವಾಣಿಯನ್ನು ಕೂಡಾ ತೆರೆಯಲಾಗಿದ್ದು, ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಮಂದಿ ಕರೆ ಮಾಡಿ ತಾವು ಮೇಘಸ್ಪೋಟದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ರಕ್ಷಣಾ ಕಾರ್ಯ ಶೀಘ್ರ ನಡೆಯಲಿದೆ. ಯಾರೇ ತೊಂದರೆಯಲ್ಲಿದ್ದರೂ ಸಹಾಯವಾಣಿಗೆ ಕರೆ ಮಾಡಿದರೆ ರಕ್ಷಣಾ ಕ್ರಮ ಕ್ಷಿಪ್ರವಾಗಿ ನಡೆಸಲಾಗುವುದು. ಸಹಾಯವಾಣಿ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಸಹಾಯವಾಣಿ ಸಂಖ್ಯೆಗಳು
*ಎನ್.ಡಿ.ಆರ್.ಎಫ್: 011-23438252, 011-23438253
*ಕಶ್ಮೀರ್ ಡಿವಿಷನಲ್ ಹೆಲ್ಪ್ಲೈನ್: 0914- 2496240
*ದೇವಸ್ಥಾನ ಮಂಡಳಿಯ ಸಹಾಯವಾಣಿ: 0194-2313149
*ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ : 080-1070, 22340676
--
ದ.ಕ. ಜಿಲ್ಲೆಯ ಯಾತ್ರಿಗಳ ಮಾಹಿತಿ ನೀಡಿ
ದಕ್ಷಿಣ ಕನ್ನಡ ಜಿಲ್ಲೆಯಿಂದ ಅಮರನಾಥ ಯಾತ್ರೆ ಕೈಗೊಂಡು ಮೇಘಸ್ಪೋಟಕ್ಕೆ ಸಿಲುಕಿರುವ ಅಥವಾ ಸುರಕ್ಷಿತವಾಗಿರುವ ಯಾತ್ರಾರ್ಥಿಗಳಿದ್ದಲ್ಲಿ ಅವರ ಸಂಬಂಧಿಕರು ತತ್ಕ್ಷಣ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಟೋಲ್ ಫ್ರೀ ಸಂಖ್ಯೆ 1077ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಮನವಿ ಮಾಡಿದ್ದಾರೆ.