ಸಕಲೇಶಪುರ, ಜು 09 (DaijiworldNews/DB): ಹಾಸನದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಘಟನೆ ಶಿರಾಡಿಘಾಟ್ನಲ್ಲಿ ನಡೆದಿದೆ.
ಲಾರಿಯು ಶಿರಾಡಿಘಾಟ್ನ ತಿರುವಿನಲ್ಲಿ ನಿಂತಿತ್ತು. ಈ ವೇಳೆ ಹಿಂದಿನಿಂದ ಬಂದ ಬಸ್ ಲಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬಸ್ನ ಮುಂಭಾಗ ನಜ್ಜುಗುಜ್ಜಾಗಿದೆ. ಬಸ್ನಲ್ಲಿದ್ದ 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮಂಗಳೂರಿಗೆ ಸಂಚರಿಸಲು ಅನುವು ಮಾಡಿಕೊಡಲಾಯಿತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಚಾರಕ್ಕೆ ಅಡಚಣೆಯಾಗದಂತೆ ಕ್ಷಿಪ್ರ ವ್ಯವಸ್ಥೆ ಮಾಡಲಾಯಿತು.