ಚೆನ್ನೈ, ಜು 09 (DaijiworldNews/DB): ತಮಿಳುನಾಡಿನಲ್ಲಿ ಸಹಪಾಠಿ ವಿದ್ಯಾರ್ಥಿನಿ ಮೇಲೆ ಹತ್ತನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಹೇಯ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂವರೂ ಕೂಡಾ ಕಡಲೂರು ಜಿಲ್ಲೆಯವರು. ಅತ್ಯಾಚಾರ ಎಸಗುವ ವೇಳೆ ವೀಡಿಯೋ ಚಿತ್ರೀಕರಣವನ್ನೂ ಮಾಡಿಕೊಂಡಿದ್ದು, ವೀಡಿಯೋವನ್ನು ಇತರ ವಿದ್ಯಾರ್ಥಿಗಳೊಂದಿಗೆ ಶೇರ್ ಮಾಡಿಕೊಂಡಿದ್ದರು. ಸಂತ್ರಸ್ತ ವಿದ್ಯಾರ್ಥಿನಿ ಇತ್ತೀಚೆಗೆ ಹಿರಿಯ ವಿದ್ಯಾರ್ಥಿಯೊಬ್ಬನ ಹುಟ್ಟುಹಬ್ಬಕ್ಕೆ ಹೋಗಿದ್ದ ವೇಳೆ ಆಕೆ ಮತ್ತು ಆಕೆಯ ಪ್ರಿಯತಮನ ಜೊತೆಗಿರುವ ಫೋಟೋಗಳನ್ನು ಆರೋಪಿಗಳು ತೆಗೆದಿದ್ದರು. ಅಲ್ಲದೆ, ಈ ಫೋಟೋಗಳನ್ನು ತೋರಿಸಿ ಆಕೆಗೆ ಆರೋಪಿಗಳು ಬ್ಲಾಕ್ಮೇಲ್ ಕೂಡಾ ಮಾಡುತ್ತಿದ್ದರು ಎಂದು ಥಿಟ್ಟಾಕುಡಿ ಪೊಲೀಸ್ ಇನ್ಸ್ ಪೆಕ್ಟರ್ ಕೃಪಾ ತಿಳಿಸಿದ್ದಾರೆ.
ಮಧ್ಯಾಹ್ನ ಊಟದ ಸಮಯದಲ್ಲಿ ಶಾಲಾ ಹಿಂಭಾಗದಲ್ಲಿರುವ ಸಹಪಾಠಿ ವಿದ್ಯಾರ್ಥಿಯ ಮನೆಗೆ ಆಕೆ ಹೋಗಿದ್ದ ವೇಳೆ ಮೂವರು ಸಹಪಾಠಿಗಳು ಅತ್ಯಾಚಾರ ಎಸಗಿದ್ದಾರೆ. ಈ ಪೈಕಿ ಓರ್ವ ವೀಡಿಯೋ ಚಿತ್ರೀಕರಣ ಮಾಡಿ ಹಂಚಿದ್ದ. ಘಟನೆಯಿಂದ ಆತಂಕಗೊಂಡ ವಿದ್ಯಾರ್ಥಿನಿ ತಾಯಿ ಜೊತೆ ವಿಷಯ ತಿಳಿಸಿದ್ದು, ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಆಧರಿಸಿ ಆರೋಪಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.