ಬೆಂಗಳೂರು, ಜು 09 (DaijiworldNews/DB): ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಅವರ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿತ್ತು ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಅರ್ಕಾವತಿ, ಕೆಪಿಎಸ್ಸಿ, ವಕ್ಫ್ ಆಸ್ತಿ ಕಬಳಿಕೆ, ಭೂ ಒತ್ತುವರಿ, ಸಿವಿಲ್ ಪೊಲೀಸ್ ನೇಮಕಾತಿ ಹಗರಣಗಳು ರಾರಾಜಿಸಿದ್ದವು. 'ಕೈ' ವಿರುದ್ಧ ಅಂದೇ ಬಿಜೆಪಿ ಧ್ವನಿ ಎತ್ತಿತ್ತು. ಸಿದ್ದು ಸ್ಮೃತಿಗೆ ಗರ ಬಡಿದಿದೆಯೇ? ಎಂದು ಪ್ರಶ್ನಿಸಿದೆ.
2014ರ ಮಾರ್ಚ್ 22ರಂದು ಕೆಪಿಎಸ್ಸಿ ನೇಮಕಾತಿ ಪಟ್ಟಿ ಬಿಡುಗಡೆಯಾಯಿತಷ್ಟೆ. ಅಂದು ಸಂಜೆಯೇ ಈ ನೇಮಕಾತಿ ಹಿಂದಿನ ಕರ್ಮಕಾಂಡದ ಬಂಡವಾಳ ಹೊರಬಿತ್ತು. ಆ ಅಕ್ರಮದಲ್ಲಿ ಏಳು ಮಂದಿಯಷ್ಟೇ ಭಾಗಿ ಎಂದು ತೇಪೆ ಹಚ್ಚಿದ ಸಿದ್ದರಾಮಯ್ಯ, ಅದರ ಬೆನ್ನಲ್ಲೇ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕವನ್ನು ರದ್ದುಗೊಳಿಸಲಿಲ್ಲವೇ? ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ಜಗದೀಶ್ ಶೆಟ್ಟರ್ ತಿರಸ್ಕರಿಸಿದ್ದ ಕಡತಕ್ಕೆ ತರಾತುರಿಯಲ್ಲಿ ಸಹಿ ಹಾಕುವ ಮೂಲಕ 541.25 ಎಕರೆ ಅರ್ಕಾವತಿ ಜಮೀನು ಡಿನೋಟಿಫಿಕೇಶನ್ ಮಾಡಿರಲಿಲ್ಲವೇ? ಆಗ ಇದನ್ನು ಬಯಲಿಗೆ ಎಳೆದು, ದನಿ ಎತ್ತಿದ್ದು ಇದೇ ಬಿಜೆಪಿ. . ಸಿದ್ದರಾಮಯ್ಯ ಇದನ್ನು ನೆನಪಿಸಿಕೊಂಡರೆ ಕ್ಷೇಮ ಎಂದು ಬಿಜೆಪಿ ತಿಳಸಿದೆ.
ಸಿದ್ದರಾಮಯ್ಯ ಆಪ್ತ ದಿನೇಶ್ ಗುಂಡೂರಾವ್ ಸಚಿವರಾಗಿದ್ದಾಗ ಅವರ ಕುಟುಂಬಸ್ಥರು ಬೆಂಗಳೂರಿನ ಹೊರವಲಯದಲ್ಲಿ 10.9 ಎಕರೆ ಸರಕಾರಿ ಜಮೀನು ಕಬಳಿಸಿರಲಿಲ್ಲವೇ? ಅಂದಿನ ಲೋಕಾಯುಕ್ತರು ಈ ಬಗ್ಗೆ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರಲಿಲ್ಲವೇ? ಮಾಜಿ ಸಿ.ಎಂ.ಗೆ ಕವಿದಿರುವ ಮರೆವಾದರೂ ಎಂಥದ್ದು? ಎಂದು ಸಿದ್ದರಾಮಯ್ಯರನ್ನು ಬಿಜೆಪಿ ಪ್ರಶ್ನೆ ಮಾಡಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಖಮರುಲ್ ಇಸ್ಲಾಂ ಕೊರಳಿಗೆ ವಕ್ಫ್ ಆಸ್ತಿ ಕಬಳಿಕೆ ಹಗರಣ ಸುತ್ತಿಕೊಂಡಿರಲಿಲ್ಲವೇ? ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾಕ್ಕೆ ಸೇರಿದ 8.34 ಎಕರೆ ಜಮೀನು ಅಕ್ರಮವಾಗಿ ಕಬಳಿಸಿದ ಆರೋಪ ಬಂದಿತ್ತು. ಆಗ ಲೋಕಾಯುಕ್ತ ವಿಶೇಷ ನ್ಯಾಯಲಯ ತನಿಖೆ ನಡೆಸಲು ಆದೇಶ ನೀಡಿತ್ತು. ಸಿದ್ದರಾಮಯ್ಯನವರ ಆಪ್ತ ಮಹದೇವ ಪ್ರಸಾದ್ ಸಹಕಾರ ಸಚಿವರಾಗಿದ್ದಾಗ ಕರ್ನಾಟಕ ಗೃಹ ಮಂಡಳಿ ಬಡವರಿಗೆಂದು ಮೀಸಲಿಟ್ಟಿದ್ದ ನಿವೇಶನಗಳ ಪೈಕಿ ಮೂರ್ಮೂರು ನಿವೇಶನಗಳನ್ನು ಅಕ್ರಮವಾಗಿ ಖರೀದಿ ಮಾಡಿರಲಿಲ್ಲವೆ? ಈ ಸಂಬಂಧ ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿರಲಿಲ್ಲವೇ? ಸಿದ್ದು ಸ್ಮೃತಿ ಮಂಕಾಗಿದೆಯೇ? ಎಂದು ತೀವ್ರ ವಾಗ್ದಾಳಿ ನಡೆಸಿದೆ.
ಸಿದ್ದರಾಮಯ್ಯನವರು ಕರ್ನಾಟಕ ಲೋಕಾಯುಕ್ತವನ್ನು ಸಮಾಧಿ ಮಾಡಿದ್ದಕ್ಕೆ ಬೆಟ್ಟದಷ್ಟು ಪುರಾವೆಗಳಿವೆ. ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಎಲ್ಲವನ್ನೂ ಬಯಲಿಗೆ ಎಳೆಯಲಿದೆ. ಏರುಧ್ವನಿಯಲ್ಲಿ ಮಾತನಾಡಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗುವುದಿಲ್ಲ ಎಂದು ಇದೇ ವೇಳೆ ಬಿಜೆಪಿ ಸಿದ್ದರಾಮಯ್ಯ ವಿರುದ್ದ ಗರಂ ಆಗಿದೆ.