ಬೆಂಗಳೂರು, ಜು 09 (DaijiworldNews/DB): ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲಿರುವ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭಾನುವಾರ ಬೆಂಗಳೂರಿಗೆ ಭೇಟಿ ನೀಡಲಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಚುನಾವಣಾ ಪ್ರಚಾರಾರ್ಥ ಮುರ್ಮು ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಿಜೆಪಿ ಶಾಸಕರು ಮತ್ತು ಸಂಸದರ ಸಭೆಯಲ್ಲಿ ಅವರು ಭಾಗವಹಿಸಲಿದ್ದು, ಈಗಾಗಲೇ ಹಲವಾರು ಕಾರ್ಯಕ್ರಮಗಳು ನಿಶ್ಚಯವಾಗಿದೆ. ಈ ನಡುವೆ ಸಮಯ ಸಿಕ್ಕಲ್ಲಿ ಮತ್ತು ದೇವೇಗೌಡರ ಭೇಟಿಗೆ ಅವಕಾಶ ಸಿಕ್ಕಲ್ಲಿ ಜೆಡಿಎಸ್ ವರಿಷ್ಠರನ್ನು ಅವರು ಭೇಟಿಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಮುರ್ಮು ಅವರಿಗೆ ಈಗಾಗಲೇ ಜೆಡಿಎಸ್ ಪಕ್ಷವು ನೈತಿಕ ಬೆಂಬಲ ಘೋಷಿಸಿದ್ದು, ಭೇಟಿಗೆ ಸಮಯ ಸಿಗದೇ ಇದ್ದಲ್ಲಿ ದೇವೇಗೌಡರೊಂದಿಗೆ ಮುರ್ಮು ಅವರು ದೂರವಾಣಿ ಮೂಲಕ ಮಾತನಾಡಿ ಬೆಂಬಲ ಕೇಳುವ ಸಾಧ್ಯತೆ ಇದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಜವಾಬ್ದಾರಿಯನ್ನು ಈಗಾಗಲೇ ದೇವೇಗೌಡರು ಪುತ್ರ ಎಚ್.ಡಿ. ಕುಮಾರಸ್ವಾಮಿಗೆ ನೀಡಿದ್ದಾರೆ ಎನ್ನಲಾಗಿದೆ. ಈ ಮೊದಲೇ ಅಭ್ಯರ್ಥಿಯಾಗಿ ತಾವು ಆಯ್ಕೆಯಾದಾಗಲೇ ಮುರ್ಮು ಅವರು ದೇವೇಗೌಡರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಬೆಂಬಲ ಕೋರಿದ್ದರು.
ಗೌಡರನ್ನು ಭೇಟಿಯಾಗದ ಸಿನ್ಹಾ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನವದೆಹಲಿಯಲ್ಲಿ ಕರೆದ ಸಭೆಯಲ್ಲಿ ಭಾಗಿಯಾಗಿದ್ದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ವಿಪಕ್ಷಗಳ ಒಮ್ಮತದ ಅಭ್ಯರ್ಥಿ ಯಶ್ವಂತ್ ಸಿನ್ಹಾ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದರಾದರೂ, ಬಳಿಕ ತಮ್ಮ ನಿರ್ಧಾರ ಬದಲಿಸಿ ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿದ್ದರು. ಈ ನಡುವೆ ಬೆಂಗಳೂರಿಗೆ ಇತ್ತೀಚೆಗೆ ಆಗಮಿಸಿದ್ದ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶ್ವಂತ್ ಸಿನ್ಹಾ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ದೇವೇಗೌಡರನ್ನು ಭೇಟಿಯಾಗದೇ ದೆಹಲಿಗೆ ಹಿಂತಿರುಗಿದ್ದರು. ಸಿನ್ಹಾ ಮತ್ತು ದೇವೇಗೌಡರ ನಡುವೆ ಸಂಬಂಧ ಉತ್ತಮವಾಗಿಲ್ಲ ಎಂದು ಹೇಳಲಾಗುತ್ತಿದೆ.