ನವದೆಹಲಿ, ಜು 09 (DaijiworldNews/DB): ಜಾರ್ಖಂಡ್ ಉದ್ಯಮಿ ಕನ್ಹಯ್ಯ ಸಿಂಗ್ ಕೊಲೆ ಸಂಬಂಧಪಟ್ಟಂತೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ತಂದೆಯ ಕೊಲೆಗೆ ಮಗಳೇ ಸುಪಾರಿ ನೀಡಿದ್ದಳು ಎಂಬ ಆಘಾತಕಾರಿ ಅಂಶ ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಸುಪಾರಿ ಹಂತಕನಿಗೆ ತಂದೆ ಗಿಫ್ಟ್ ನೀಡಿದ್ದ ವಜ್ರದುಂಗುರವನ್ನು ಮಗಳು ಸುಪಾರಿ ಹಣದ ಬದಲಿಗೆ ನೀಡಿದ್ದಳು ಎನ್ನಲಾಗಿದೆ.
ಜಾರ್ಖಂಡ್ನ ಸೆರೈಕಲ-ಖರ್ಸ್ವನ್ ಜಿಲ್ಲೆಯ ಉದ್ಯಮಿ ಕನ್ಹಯ್ಯ ಸಿಂಗ್ ಎಂಬವರನ್ನು ಜೂ. 29ರಂದು ಹರಿಓಂನಗರ್ ಪ್ರದೇಶದಲ್ಲಿ ಅಪರಿಚಿತರರು ಗುಂಡಿಟ್ಟು ಕೊಲೆ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಉದ್ಯಮಿಯ ಪುತ್ರಿ, ಅಪರ್ಣ ಸಿಂಗ್ (20), ಆಕೆಯ ಪ್ರಿಯಕರ ರಾಜ್ವೀರ್ ಸಿಂಗ್, ಶೂಟರ್ ನಿಖಿಲ್ ಗುಪ್ತ ಮತ್ತು ಆತನ ಸಹಚರ ಸೌರಭ್ ಕಿಸ್ಕು ಅವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಆನಂದ್ ಪ್ರಕಾಶ್ ತಿಳಿಸಿದ್ದಾರೆ.
ಅಪರ್ಣ ಮತ್ತು ರಾಜ್ವೀರ್ ಪ್ರೀತಿಸುತ್ತಿದ್ದು, ಇವರ ಮದುವೆಗೆ ಕನ್ಹಯ್ಯ ಸಿಂಗ್ ವಿರೋಧಿಸಿದ್ದರಲ್ಲದೆ, ಮಗಳಿಗೆ ಬೇರೆ ಮದುವೆ ಮಾಡಲು ವರ ಹುಡುಕುತ್ತಿದ್ದರು. ಇದರಿಂದ ಆಕ್ರೋಶಗೊಂಡ ಮಗಳು ಅಪರ್ಣ ಪ್ರಿಯಕರನೊಂದಿಗೆ ಸೇರಿ ಕಳೆದ ಮೂರು ವರ್ಷಗಳಿಂದ ತಂದೆಯ ಕೊಲೆಗೆ ಸಂಚು ರೂಪಿಸಿದ್ದಳು. ಜೂ. 20ರಂದು ಪಾಟ್ನಾದಲ್ಲಿ ಕೊಲೆಗೈಯಲು ಸಂಚು ರೂಪಿಸಿ ವಿಫಲರಾಗಿದ್ದರು. ಬಳಿಕ ಜೂ. 29ರಂದು ಹರಿಓಂನಗರ್ ಪ್ರದೇಶದಲ್ಲಿಕೊಲೆಗೈಯಲಾಗಿದೆ. ಇದಕ್ಕಾಗಿ ಶೂಟರ್ ನಿಖಿಲ್, ಆತನ ಸಹಚರ ಸೌರಭ್ ಕಿಸ್ಕು ಅವರಿಗೆ ಸುಪಾರಿ ನೀಡಿದ್ದಳು. ಸುಪಾರಿಗೆ ಹಣದ ಬದಲಾಗಿ ತಂದೆ ಉಡುಗೊರೆಯಾಗಿ ನೀಡಿದ್ದ ವಜ್ರದುಂಗುರವನ್ನೇ ನೀಡಿದ್ದಾಳೆ ಎಂಬುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.